Friday, February 11, 2011

Heike ಏಡಿಗಳ ಒಗಟು



ಕಾರ್ಯ-ಕಾರಣ (cause & effect) ಸಂಬಂಧದ ತಪ್ಪು ತಿಳುವಳಿಕೆ ಹಲವು ಬಾರಿ ಮೂಢ ನಂಬಿಕೆಗಳಿಗೆ ದಾರಿ ಮಾಡಿಕೊಡುತ್ತದೆ. ಇದಕ್ಕೊಂದು ಜ್ವಲಂತ ಉದಾಹರಣೆಯೆಂದರೆ ಜಪಾನಿನಲ್ಲಿ ಈಗಲೂ ಪ್ರಚಲಿತವಿರುವ Heiki Crab ಗಳ ದಂತ ಕಥೆ. ಕ್ರಿ.ಶ. 1185 ರಲ್ಲಿ        ಜಪಾನಿನಲ್ಲಿ ಹೇಕಿ (Heiki) ಮತ್ತು ಗೆಂಜಿ(Genji) ಎಂಬ ಎರಡು ಸಮುರಾಯ್(Samurai) ಬಣಗಳಿದ್ದುವು. ಹೇಕಿಗಳು ಅಧಿಕಾರದಲ್ಲಿದ್ದರು. ಈ ಎರಡೂ ಬಣಗಳ ನಡುವೆ ದೀರ್ಘ ಕಾಲದ ರಕ್ತಸಿಕ್ತ ಯುದ್ಧದ ಇತಿಹಾಸವಿದೆ. ಏಪ್ರಿಲ್ 24 ಕ್ರಿ.ಶ.1185 ರಂದು ಇವರಿಬ್ಬರ ನಡುವೆ ಒಂದು ನಿರ್ಣಾಯಕ ಯುದ್ಧ ಸಂಭವಿಸಿತು. ಆಗ ಅಂಟೋಕು ಎಂಬ ಪುಟ್ಟ ಬಾಲಕ ಜಪಾನಿನ (ಹೇಕಿಗಳ) ಸಾಮ್ರಾಟನಾಗಿದ್ದ. ಡನೊಉರಾ (Danno-ura) ಪಟ್ಟಣದ ಹತ್ತಿರವಿರುವ ಸಮುದ್ರದಲ್ಲಿ ನಡೆದ ಭೀಕರ ಕಾಳಗದಲ್ಲಿ ಹೇಕಿಗಳ ಪತನವಾಯಿತು.ಅಸಂಖ್ಯಾತ ಹೇಕಿಗಳು ಹತರಾದರು. ಶತ್ರುಗಳಿಗೆ ಶರಣಾಗಿ ಚಹಿತ್ರಹಿಂಸೆ ಅನುಭವಿಸಿ ಸಾಯುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸೆಂದು ಹಲವಾರು ಹೆಂಗಸರು, ವೃದ್ಧರು, ತಮ್ಮ ಮಕ್ಕಳೊಂದಿಗೆ ಸಮುದ್ರದಲ್ಲಿ ಹಾರಿ ಸತ್ತರು. ಬಾಲಕ ಅಂಟೋಕುವನ್ನು ತಬ್ಬಿಕೊಂಡು ಅವನ ಅಜ್ಜಿಯೂ ಸಮುದ್ರದಲ್ಲಿ ಹಾರಿಕೊಂಡಳು. ಯುದ್ಧ ಮುಗಿದಾಗ ಹೇಕಿಗಳಲ್ಲಿ ಬದುಕುಳಿದ್ದದ್ದು ಕೇವಲ 43 ಮಹಿಳೆಯರಷ್ಟೆ. ಯುದ್ಧ ಮುಗಿದ ನಂತರ ಆ ಮಹಿಳೆಯರು ಅಲ್ಲೇ ಡನೋಉರಾದ ತೀರದಲ್ಲಿ ಹೂವು ಹಣ್ಣು ಮಾರುತ್ತಾ, ಡನೊಉರಾದ ಬೆಸ್ತರೊಡನೆ ಮದುವೆ ಮಾಡಿಕೊಂಡು ಜೀವನ ಸಾಗಿಸಿದರು.


ಇವರಿಂದ ಹುಟ್ಟಿದ ಸಂತತಿಯು ಡನೊಉರಾ ಯುದ್ಧದ ನೆನಪಿನಲ್ಲಿ ಪ್ರತೀ ವರ್ಷ ಏಪ್ರಿಲ್ 24 ರಂದು ಹಬ್ಬವನ್ನಾಚರಿಸುತ್ತಾರೆ, ಅಂಟೋಕುವಿನ ಸಮಾಧಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾರೆ. ಈಗಲೂ ಅಲ್ಲಿರುವ ಜನರು ಹೇಕಿಗಳು ಎಲ್ಲಿಯೂ ಹೋಗಿಲ್ಲ ಅವರೆಲ್ಲರೂ ಸಮುದ್ರ ತಳದಲ್ಲಿ ಏಡಿಗಳಾಗಿ ಓಡಾಡುತ್ತಿದ್ದಾರೆ ಹಾಗೂ ಮುಂದೊಂದು ದಿನ ತಮಗಾದ ಅವಮಾನಕ್ಕೆ ಪ್ರತಿಕಾರ ಖಂಡಿತವಾಗಿಯೂ ತೀರಿಸಿಕೊಳ್ಳುತ್ತಾರೆ ಎಂದು ನಂಬುತ್ತಾರೆ. ಅವರ ಈ ನಂಬಿಕೆಗೆ ಕಾರಣವಿಲ್ಲದಿಲ್ಲ. ನೀವೆ ಒಮ್ಮೆ ಡನೋಉರಾಕ್ಕೆ ಹೋಗಿ ಅಲ್ಲಿ ಸಿಕ್ಕುವ ಏಡಿಗಳನ್ನೊಮ್ಮೆ ನೋಡಿದರೆ ಅವರ ಈ ದಂತಕಥೆಯನ್ನು ನಂಬದಿರಲು ಸಾಧ್ಯವಿಲ್ಲ. ಇಲ್ಲಿ ದೊರೆಯುವ ಏಡಿಗಳ ಮೇಲ್ಚಿಪ್ಪು ಥೇಟ್ ಸಮುರಾಯ್ ಮುಖವನ್ನು ಹೋಲುತ್ತವೆ. ಬೆಸ್ತರಿಗೆ ಸಮುರಾಯ್ ಮುಖವುಳ್ಳ ಏಡಿಗಳು ದೊರೆತಾಗ ಅವನ್ನು ತಿನ್ನುವುದಿಲ್ಲ, ಸಮುದ್ರಕ್ಕೇ ವಾಪಸ್ ಎಸೆದು ಬಿಡುತ್ತಾರೆ. ಭೂಮಿಯ ಬೇರೆ ಯಾವ ಭಾಗದಲ್ಲೂ ದೊರೆಯದ ಈ ಬಗೆಯ ಏಡಿಗಳು ಇಲ್ಲಿ ಹೇಗೆ ಬಂದುವು?
ಈ ವಿದ್ಯಮಾನ ಮೇಲ್ನೋಟಕ್ಕೆ ಅದ್ಭುತ  ಅಥವಾ ಪವಾಡವೆಂಬಂತೆ ಗೋಚರಿಸುತ್ತದೆ. ಆದರೆ ವಿಕಾಸವಾದದ ಸಿದ್ಧಾಂತಗಳನ್ನು ಕೂಲಂಕಷವಾಗಿ ಅರ್ಥ ಮಾಡಿಕೊಂಡ ಯಾರಿಗಾದರೂ ಇದರ ಹಿಂದಿನ ಮರ್ಮ ಅರ್ಥವಾಗುವುದರಲ್ಲಿ  ಹೆಚ್ಚು ಸಮಯ ಹಿಡಿಯುವುದಿಲ್ಲ. ನಿಮಗೆಲ್ಲಾ ತಿಳಿದಿರುವಂತೆ ಒಂದು ಜೀವಿಯಲ್ಲಿ ಭೂಮಿಯ ಮೇಲೆ ಬದುಕುಳಿಯಲು ಸಹಾಯಕಾರಿಯಾಗುವಂತಹ ಗುಣಗಳಿದ್ದರೆ ನಿಸರ್ಗವೇ ಆ ಜೀವಿಯನ್ನು ಈ ಭೂಮಿಯ ಮೇಲೆ ಬದುಕಲು ಆಯ್ಕೆ ಮಾಡಿಕೊಳ್ಳುತ್ತದೆ, ಹಾಗೂ ಅವುಗಳ ಸಂತತಿಯು ಮುಂದುವರಿಯುತ್ತದೆ. ಇದನ್ನು Theory of Natural Selection ಅಂತ ಕರೆಯುತ್ತಾರೆ. ಇದು ನಿಸರ್ಗ ವಾಗಲಿ, ಅಥವಾ ಜೀವಿಗಳಾಗಲಿ ಪ್ರಜ್ಞಾಪೂರ್ವಕವಾಗಿ ನಡೆಸುವಂಥ ಕ್ರಿಯೆಯಲ್ಲ. ಇದೊಂದು ‘ನಿಸರ್ಗ-ನಿಯಮ’ವಷ್ಟೇ. ಈ ನಿಯಮದೊಳಗೆ ನಾವೆಲ್ಲರೂ ಅಪ್ರಜ್ಞಾಪೂರ್ವಕವಾಗಿಯೇ ಬಂಧಿತರಾಗಿದ್ದೇವೆ. ಆದರೆ ಕೆಲವು ಜೀವಿಗಳ ಉಳಿಯುವ ಅಥವಾ ಅಳಿಯುವ ವಿಚಾರದಲ್ಲಿ ಮಾನವನೇ ಪರೋಕ್ಷವಾಗಿ ಕಾರಣನಾಗುತ್ತಾನೆ. ಇದನ್ನು Theory of Artificial Selection ಎಂದು ಕರೆತ್ತೇವೆ. ಇದಕ್ಕೆ ಉದಾಹರಣೆಯಾಗಿ ನಮ್ಮ ಮುಂದೆ ಹಲವಾರು ಪ್ರಭೇದದ ಸಾಕು ಪ್ರಾಣಿ ಮತ್ತು ಸಸ್ಯಗಳಿವೆ- ಹೆಚ್ಚು ಇಳುವರಿ ಕೊಡುವ ವಿವಿಧ ಸಸ್ಯಗಳು, ಹೆಚ್ಚು ಹಾಲು ಕೊಡುವ ಹಸು-ಎಮ್ಮೆಗಳು ಹಾಗೂ ಅಧಿಕ ಉಣ್ಣೆ ಕೊಡುವ ಕುರಿಗಳು. ವಿವಿಧ ಜೀವ ಸಂಕುಲಗಳ ವಿಕಾಸದ ಹಾದಿಯಲ್ಲಿ, ನೈಸರ್ಗಿಕ ಮತ್ತು ಕೃತ್ರಿಮವಾದ ಈ ಎರಡೂ ಪ್ರಕ್ರಿಯೆಗಳು ಮುಖ್ಯ ಪಾತ್ರ ವಹಿಸಿವೆ. ಇದರ ಫಲವೇ ಇಂದು ನಾವು ಕಾಣುವ ಅದ್ಭುತ ಜೀವ-ವೈವಿಧ್ಯಗಳಿಂದ ಕೂಡಿದ ಈ ಪೃಥ್ವಿ.



ಹೇಕಿ ಏಡಿಗಳ ವಿಚಾರದಲ್ಲಿ ಕೆಲಸ ಮಾಡಿರುವುದು Artficial Selection ಎಂಬ ಪ್ರಕ್ರಿಯೆ. ಡನೊಉರಾದ ಬೆಸ್ತರು ಅಪ್ರಜ್ಞಾಪೂರ್ವಕವಾಗಿಯೇ ಈ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಚಿಟ್ಟೆಗಳಲ್ಲಿ ಮೂಡುವಂತೆ ಏಡಿಗಳ ಚಿಪ್ಪಿನ ಮೇಲೂ ವಿವಿಧ ವೀನ್ಯಾಸ ಮೂಡುವುದು ಸಹಜ. ಆಕಸ್ಮಿವಾಗಿ ಕೆಲವೊಂದು ಏಡಿಗಳ ಮೇಲೆ ಮನುಷ್ಯರನ್ನು ಹೋಲುವಂತಹ ವಿನ್ಯಾಸ ಮೂಡಿದೆ. ಬೆಸ್ತರಿಗೆ ಇವು ಆಕಸ್ಮಿವಾಗಿ ದೊರೆತಾಗ ಅವುಗಳನ್ನು ತಿನ್ನಲು ಮನಸ್ಸಾಗದೇ ಹಾಗೆಯೇ ಸಮುದ್ರದಲ್ಲಿ ಬಿಸಾಡಿದ್ದಾರೆ. ಹೀಗೆ ಪ್ರತಿ ಬಾರಿ ಮನುಷ್ಯನ ಮುಖ ಹೊತ್ತ ಏಡಿಗಳು ದೊರೆತಾಗಲೆಲ್ಲಾ ಅವುಗಳನ್ನು ತಿನ್ನದೇ ಹಾಗೇ ಬಿಟ್ಟಿದ್ದಾನೆ. ಹೀಗೇ ಈ ಮಾನವ-ಮುಖೀ ಏಡಿಗಳಿಗೆ ತಮ್ಮ ರೂಪವು ವರದಾನವಾಗಿ ಲಭಿಸಿತು. ಹಾಗಾಗಿ ಕೆಲವೇ ಶತಮಾನಗಳಲ್ಲಿ ಅವುಗಳ ಸಂಖ್ಯೆ ಅಗಾಧವಾಗಿ ಬೆಳೆಯಿತು ಹಾಗೂ ಇನ್ನಿತರ ಏಡಿಗಳು ಆ ಕೊಲ್ಲಿಯಿದಿಂದ ನಿರ್ನಾಮವಾಗಿ ಹೋದುವು. ನೂರಾರು ವರ್ಷಗಳಿಂದ, ದಿನೇ-ದಿನೇ ನಡೆದುಕೊಂಡು ಬಂದಿರುವ ಈ ಪ್ರಕ್ರಿಯೆಯು ಕೇವಲ ಮಾನವ ಮುಖವನ್ನಷ್ಟೇ ಅಲ್ಲ ಬದಲಾಗಿ ಸಿಟ್ಟು ಹಾಗೂ ಅವಮಾನದಿಂದ ಬುಸುಗುಡುತ್ತಿರುವ ಸಮುರಾಯ್ ಮುಖವನ್ನು ಹೊತ್ತ ಏಡಿಗಳನ್ನು ಸೃಷ್ಟಿಸಿದೆ. ಈ ಇಡೀ ವಿದ್ಯಮಾನದ ವಿಷ್ಲೇಷಣೆ ಮಾಡುವಾಗ ಒಂದು ವಿಷಯವನ್ನು ನೆನಪಿಟ್ಟುಕೊಳ್ಳಬೇಕು ಅದೆಂದರೆ ಈ ಇಡೀ ಪ್ರಕ್ರಿಯೆಯಲ್ಲಿ ಬೆಸ್ತರಾಗಲೀ, ಏಡಿಗಳಾಗಲೀ ಪ್ರಜ್ಞಾಪೂರ್ವಕವಾಗಿ ಭಾಗಿಯಾಗಿಲ್ಲವೆನ್ನುವುದು.
 

No comments:

Post a Comment