Monday, February 14, 2011

ಕಳೆದುಹೋದ ಅದ್ಭುತ ನಾಗರಿಕತೆ ಅಲೆಕ್ಸಾಂಡ್ರಿಯಾ…


ಮಗೆಲ್ಲರಿಗೂ ಗೊತ್ತಿರುವ ಹಾಗೆ ಇತಿಹಾಸದ ಪುಟಗಳಲ್ಲಿ ಕೋಪರ್ನಿಕಸ್ ನನ್ನು ವೈಜ್ಞಾನಿಕ ಕ್ರಾಂತಿಯ ಹರಿಕಾರನೆಂದೇ ಬಣ್ಣಿಸಲಾಗಿದೆ. ಇದು ಉತ್ಪ್ರೇಕ್ಷೆಯಂತೂ ಅಲ್ಲ.ಸಹಸ್ರಾರು ವರ್ಷಗಳ ತನಕ ಮಾನವ ಭೂಮಿಯನ್ನು ವಿಶ್ವದ ಕೇಂದ್ರದಲ್ಲಿರಿಸಿ ತನಗಾಗಿ ಈ ವಿಶ್ವದಲ್ಲಿ ವಿಶಿಷ್ಟ ಸ್ಥಾನವನ್ನು ಕಲ್ಪಿಸಿಕೊಂಡಿದ್ದ. ಈ ನಂಬಿಕೆಯು ಹಲವಾರು ಧರ್ಮಗಳಿಗೆ ಹಾಗೂ ಮಾನವಕೇಂದ್ರಿತ ತತ್ವಶಾಸ್ತ್ರಜ್ಞರಿಗೆ ಬಲಕೊಟ್ಟಿದ್ದಿತು. ಈ ನಂಬಿಕೆಗೆ ಬಲವಾದ ಪೆಟ್ಟು ಕೊಟ್ಟಿದ್ದು ಕೋಪರ್ನಿಕಸ್ ನ ಸೂರ್ಯ-ಕೇಂದ್ರಿತ ಸಿದ್ಧಾಂತ. ಸುಧೀರ್ಘವಾದ ಅಂಧಕಾರ ಯುಗದ ನಂತರ ಮೊದಲಬಾರಿಗೆ ಮಾನವ ಪ್ರಚಲಿತ ಹಾಗೂ ಆಡಳಿತ ವರ್ಗದಿಂದ ಬೆಂಬಲಿತ ನಂಬಿಕೆಗಳನ್ನು ಪ್ರಶ್ನಿಸತೊಡಗಿದ. ಆ ನಂತರ ನಡೆದ ಬೆಳವಣಿಗೆಯನ್ನು ಒಂದು ಜ್ಞಾನ-ಸ್ಫೋಟವೆಂದೇ ಕರೆಯಬಹುದು.ಕೇವಲ ವೈಜ್ಞಾನಿಕ ಕ್ಷೇತ್ರವೊಂದೇ ಅಲ್ಲ ಇನ್ನಿತರ ರಂಗಗಳಾದ ಕಲೆ, ರಾಜಕೀಯ,ಆಧ್ಯಾತ್ಮ,ಕೈಗಾರಿಕೆ,ವಾಣಿಜ್ಯ ವಿಷಯಗಳಲ್ಲೂ ಕ್ರಾಂತಿಯುಂಟಾಯಿತು. ಒಂದು ರೀತಿಯಲ್ಲಿ ಮನುಕುಲ ಜ್ಞಾನದ ಒಳಹರಿವಿಗೆ ಮುಕ್ತಮನಸ್ಸಿನಿಂದ ಬಾಗಿಲು ತೆರೆದುಕೊಂಡಿತು. ಇಂದಿನ ಹಾಗೂ ಮುಂಬರುವ ಪೀಳಿಗೆಗಳು ಈ ಕ್ರಾಂತಿಯುಗವನ್ನು ಮನುಕುಲದ ಸ್ವರ್ಣಯುಗವೆಂದು ಕರೆದರೆ ಅತಿಶಯೋಕ್ತಿಯಾಗುವುದಿಲ್ಲ. ನಾವು ಎಂದೆಂದಿಗೂ ಈ ಕ್ರಾಂತಿಗೆ ಕಾರಣಕರ್ತರಾದವರಿಗೆ ಚಿರಋಣಿಯಾಗಿರಬೇಕಾಗಿರುತ್ತದೆ.

ಈಗ ನಾನು ಹೇಳಹೊರಟಿರುವುದು ಈ ಕ್ರಾಂತಿ ಯುಗದ ಭವ್ಯ ಇತಿಹಾಸವನ್ನಲ್ಲ ಆದರೆ ಈ ಯುಗದ ಎಲ್ಲಾ ಶ್ರೇಷ್ಠ ಗುಣಲಕ್ಷಣಗಳಿದ್ದ, ಕಾಲ-ಗರ್ಭದಲ್ಲಿ ಹುದುಗಿಹೋದ ಭವ್ಯ ನಾಗರಿಕತೆಯ ಬಗ್ಗೆ. ಒಂದು ವೇಳೆ ಈ ನಾಗರೀಕತೆಯು ಧರ್ಮ ಹಾಗೂ ರಾಜಕೀಯ ಯುದ್ಧಗಳ ನಡುವೆ ಪದೇ-ಪದೇ ಸಿಲುಕದೇ ಹೋಗಿದ್ದಿದ್ದರೆ ನಮಗೆ ‘ಕೋಪರ್ನಿಕಸ್-ಕ್ರಾಂತಿ’ಯವರೆಗೂ ಕಾಯುವ ಪ್ರಮೇಯವೆ ಬರುತ್ತಿರಲಿಲ್ಲವೇನೋ ಅನಿಸುತ್ತದೆ. ಮನಸ್ಸಿನಲ್ಲಿ ಈ "ರೆ" ಹೊಂದಿದ ಪದಗಳು ಮೂಡದೇ ಇತಿಹಾಸವನ್ನು ಓದುವುದು ಬಹುಶಃ ಕಷ್ಟವಾಗಬಹುದು.

ನಮ್ಮಲ್ಲಿ ಗ್ರೀಕ್ ದೊರೆ ಅಲೆಕ್ಸಾಂಡರನ ಹೆಸರು ಕೇಳದಿರುವವರು ತುಂಬಾ ವಿರಳ. ಜಗತ್ತಿನೆಲ್ಲೆಡೆ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂದು ಬಯಸಿದ ಮೊದಲ ಚಕ್ರವರ್ತಿಯವನು. ಅಲೆಕ್ಸಾಂಡರ್ ಕೇವಲ ತನ್ನ ಇದೊಂದೇ ಮಹತ್ವಕಾಂಕ್ಷೆಗಾಗಿ ಹೆಸರುವಾಸಿಯಾಗಲಿಲ್ಲ. ಗ್ರೀಕ್ ಸಾಮ್ರಾಜ್ಯದ  ಸಾಂಸ್ಕೃತಿಕ ಹಾಗೂ ಭೌದ್ದಿಕ ಬೆಳವಣಿಗೆಗೆ ಅವನು ಅವಕ್ಕೆ ನೀಡಿದ ಉತ್ತೇಜನವೂ ಒಂದು  ಕಾರಣವೆಂದು ಹೇಳಬಹುದು. ಅಲೆಕ್ಸಾಂಡರ್ ಅಂದಿನ ಮಹಾನ್ ತತ್ವಜ್ಞಾನಿ ಅರಿಸ್ಟಾಟಲನ ಶಿಷ್ಯನಾಗಿದ್ದರಿಂದ ಸಹಜವಾಗಿಯೆ ಅವನಿಗೆ ಸಾಂಸ್ಕೃತಿಕ ಮತ್ತು ಇತರ ಶಾಸ್ತ್ರಗಳೆಡೆಗೆ ಆಸಕ್ತಿಯಿದ್ದಿತು. ತನ್ನ ರಾಜ್ಯದಲ್ಲಿ ವಿವಿಧ ದೇಶಗಳ ಸಂಸ್ಕೃತಿಗಳನ್ನು ಮತ್ತು ಗಣಿತಶಾಸ್ತ್ರ, ಖಗೋಳಶಾಸ್ತ್ರ,ವೈದ್ಯಶಾಸ್ತ್ರ ಗಳಂತಹ ವಿವಿಧ ಶಾಸ್ತ್ರಗಳನ್ನು ಕಲಿಯಲು ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಿದ. ಅಲೆಕ್ಸಾಂಡರ್ ಕ್ರಿ.ಪೂ.300 ರ ಆಸುಪಾಸಿನಲ್ಲಿ ಈಗಿನ ಈಜಿಪ್ಟಿನ ಬಂದರಿಗೆ ಭೇಟಿ ಕೊಡುತ್ತಾನೆ. ಮೆಡಿಟರೇನಿಯನ್ ಸಮುದ್ರಕ್ಕೆ ಅಂಟಿಕೊಂಡಿರುವ ಈ ಸ್ಥಳವು ಎಲ್ಲಾ ರೀತಿಯಿಂದಲೂ ಒಂದು ಉತ್ತಮ ನಗರವಾಗಬಹುದೆಂಬುದನ್ನು ಮನಗಂಡು ತನ್ನ ಆಡಳಿತಾಧಿಕಾರಿ ಕ್ಲಿಯೋಮೆನೆಸ್ ಗೆ ನಗರ ಕಟ್ಟುವ ಜವಾಬ್ದಾರಿವಹಿಸಿ ಹಿಂತಿರುಗುತ್ತಾನೆ.

ಅಲೆಕ್ಸಾಂಡರನ ಮರಣದ ನಂತರ ಅವನ ಸಾಮ್ರಾಜ್ಯವು ಅವನ ನಿಕಟವರ್ತಿ ಸೈನ್ಯಾಧಿಕಾರಿಗಳ ನಡುವೆ ಮೂರು ಭಾಗಗಳಾಗಿ ಹಂಚಿ ಹೋಗುತ್ತದೆ. ಆಗ ಈಜಿಪ್ಟಿನ ಈ ಹೊಸ ನಗರವನ್ನು, ಅಲೆಕ್ಸಾಂಡರನಿಗೆ ಅತ್ಯಂತ ನಿಕಟವರ್ತಿಯಾದ, ಟೋಲೆಮಿ-೧ ಸೋಟರ್ ಎಂಬ ಸೈನ್ಯಾಧಿಕಾರಿ ವಶಪಡಿಸಿಕೊಳ್ಳುತ್ತಾನೆ. ಅಲೆಕ್ಸಾಂಡರ್ ನ  ನೆನಪಿಗಾಗಿ ಈ ಪಟ್ಟಣಕ್ಕೆ "ಆಲೆಕ್ಸಾಂಡ್ರಿಯಾ" ಎಂಬ ಹೆಸರನ್ನಿಡಲಾಗುತ್ತದೆ. ಆ ಕಾಲದಲ್ಲಿ ಆಚರಣೆಯಲ್ಲಿದ್ದ ಊಳಿಗಮಾನ್ಯ ಪದ್ದತಿಯೊಂದನ್ನು ಹೊರತುಪಡಿಸಿದರೆ ಬೇರೆಲ್ಲಾ ದೃಷ್ಟಿಯಿಂದಲೂ ಇದೊಂದು ಶ್ರೇಷ್ಠ ಪಟ್ಟಣವಾಗಿದ್ದಿತು. ಈ ಪಟ್ಟಣವು ಉತ್ತಮ ಬಂದರುಗಳನ್ನು ಹೊಂದಿದ್ದರಿಂದ ಇತರ ದೇಶಗಳೊಂದಿಗೆ ಉತ್ತಮ ಸಾಂಸ್ಕೃತಿಕ ಹಾಗೂ ವಾಣಿಜ್ಯ ಸಂಬಂಧ ಬೆಳೆಸಲು ಅನುಕೂಲವಾಯಿತು. ಅಲೆಕ್ಸಾಂಡ್ರಿಯಾ ಪಟ್ಟಣ ಸದಾ ಯಾತ್ರಿಕರಿಂದ ಗಿಜಿಗುಡುತ್ತಿತ್ತು, ಇತರ ದೇಶಗಳಿಂದ ಭೇಟಿಗೆಂದು ಬಂದ ಅನೇಕರು ಇಲ್ಲಿನ ಭವ್ಯತೆಗೆ ಮಾರುಹೋಗಿ ಅಲ್ಲಿಯೇ ಶಾಶ್ವತವಾಗಿ ನೆಲಸಿದ್ದರು. ಹಾಗಾಗಿ ಈ ಪಟ್ಟಣವು ಸಾಂಸ್ಕೃತಿಕ ವೈವಿಧ್ಯದಿಂದ ಕೂಡಿತ್ತು. ವಿವಿಧ ಜನಾಂಗ ಹಾಗೂ ಧರ್ಮಕ್ಕೆ ಸೇರಿದ ಜನರು ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದ್ದರು. ಅಮೃತ ಶಿಲೆಗಳಿಂದ ಕಟ್ಟಿದ ಬೃಹತ್ ಕಟ್ಟಡಗಳು, ಅಗಲವಾದ ಹೆದ್ದಾರಿಗಳು, ಉದ್ಯಾನವನಗಳು, ಕಾರಂಜಿಗಳು ಹಾಗೂ ಇಂದಿಗೂ ಕಾಣಸಿಗುವ ಲೈಟ್ ಹೌಸ್ ಸಹಜವಾಗಿಯೇ ಇತರ ದೇಶಗಳು ಅಲೆಕ್ಸಾಂಡ್ರಿಯಾವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದವು.

ಇತಿಹಾಸಕಾರರನ್ನು ಅಲೆಕ್ಸಾಂಡ್ರಿಯಾ ಆಕರ್ಷಿಸುವುದು ಇವಿಷ್ಟೇ ಕಾರಣಗಳಿಗಲ್ಲ, ಬದಲಿಗೆ ಜ್ಞಾನಾರ್ಜನೆಗೆ ಅವರು ನೀಡಿದ ಪ್ರಾಶಸ್ತ್ಯ ಮತ್ತು ಅವರ ಬೌದ್ಧಿಕ ಸಾಧನೆಗಳಿಗಾಗಿ. ಟೋಲೆಮಿ- ೧ ನ ಆಡಾಳಿತಾವಧಿಯಲ್ಲಿ ಕಲೆ, ವಿಜ್ಞಾನ ಹಾಗೂ ತತ್ವಶಾಸ್ತ್ರಗಳ ಅಧ್ಯಯನಕ್ಕೆ ವಿಶಿಷ್ಟ ಪ್ರೋತ್ಸಾಹ ದೊರಕಿತು. ಇವುಗಳ ಅಧ್ಯಯನಕ್ಕಾಗಿಯೆಂದೇ ತನ್ನ ಅರಮನೆ ಆವರಣದಲ್ಲಿಯೇ ‘The Musaeum’ ಅನ್ನು ಸ್ಥಾಪಿಸಿದ, ಇದಕ್ಕೆ ಈ ಹೆಸರು ಗ್ರೀಕ್ ಸಂಸ್ಕೃತಿಯ ಒಂಬತ್ತು ಜ್ಞಾನ ದೇವತೆಗಳಾದ ‘The Nine Muses’ ನಿಂದಾಗಿ ಬಂದದ್ದು. ಇಂದಿನ ಅರ್ಥದಲ್ಲಿ ಇದನ್ನು ಒಂದು ವಿಶ್ವವಿದ್ಯಾಲಯ ಎಂದು ಕರೆಯಬಹುದು. ಈ ವಿದ್ಯಾಲಯವು, ಅದಕ್ಕಂಟಿಕೊಂಡ The Nine Muses ದೇವಸ್ಥಾನದ ಜೊತೆಗೆ, ವಿವಿಧ ಶಾಸ್ತ್ರಗಳ ಅಧ್ಯಯನಕ್ಕೆಂದು ಹತ್ತು ವಿಶಾಲ ಕೋಣೆಗಳನ್ನು ಹೊಂದಿತ್ತು. ಇಲ್ಲಿ ಸಾಹಿತ್ಯ, ಕಲೆ, ಗಣಿತ, ಖಗೋಳ ಶಾಸ್ತ್ರ, ವೈದ್ಯ ಶಾಸ್ತ್ರ, ಜೀವಶಾಸ್ತ್ರಗಳ ಅಧ್ಯಯನ ನಡೆಯುತ್ತಿತ್ತು. ಹಾಗೂ ಪ್ರತೀ ವಿಭಾಗಕ್ಕೂ ಪ್ರತ್ಯೇಕ ಕೊಠಡಿಗಳನ್ನು ನಿಗದಿಪಡಿಸಲಾಗಿತ್ತು. ಇಲ್ಲಿ ಸಸ್ಯಶಾಸ್ತ್ರದ ಅಧ್ಯಯನಕ್ಕೆಂದು  Botanical garden  ಹಾಗೂ ಮಾನವನ ದೇಹ ರಚನೆಯನ್ನು ಅಭ್ಯಸಿಸಲು  Dissection Hall ನ ವ್ಯವಸ್ಥೆಯೂ ಇತ್ತೆನ್ನಲಾಗಿದೆ.

ಟೋಲೆಮಿ-ನ ನಂತರ ಅವನ ಮಗ ಟೊಲೆಮಿ-೨ ‘ಫಿಲಡೆಲ್ಫಸ್’  ತನ್ನ ತಂದೆಯ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವುದಷ್ಟೇ ಅಲ್ಲದೆ ಈ ವಿದ್ಯಾಲಯಕ್ಕೆ ಹೊಂದಿಕೊಂಡಂತೆ ಒಂದು ಬೃಹತ್ ಗ್ರಂಥಾಲಯವನ್ನೂ ಕಟ್ಟಿಸಿದ. ಈ ಗ್ರಂಥಾಲಯದಲ್ಲಿ ಸುಮಾರು ಎರಡರಿಂದ ಐದು ಲಕ್ಷದಷ್ಟು ಪುಸ್ತಕಗಳ ಸಂಗ್ರಹವಿತ್ತೆಂದು ಇತಿಹಾಸಕಾರರು ಹೇಳುತ್ತಾರೆ! ಇದನ್ನು ಯಾವುದೇ ಸಮಕಾಲೀನ ಗ್ರಂಥಾಲಯಗಳಿಗೆ ಹೋಲಿಸಿದರೆ ಸುಮಾರು ಹತ್ತರಿಂದ ಮೂವತ್ತು ಪಟ್ಟು ದೊಡ್ಡದಾಗಿತ್ತು ಎಂದು ಹೇಳಬಹುದು. ಎಲ್ಲಾ ಪುಸ್ತಕಗಳನ್ನು ಪ್ಯಾಪೈರಸ್ ಎಲೆಗಳ ಮೇಲೆ ಬರೆಯಲಾಗುತ್ತಿತ್ತು.

ಇಷ್ಟು ದೊಡ್ಡ ಜ್ಞಾನ ಭಂಡಾರ ಈ ಗ್ರಂಥಾಲಯದಲ್ಲಿ ಸಂಗ್ರಹವಾದುದರ ಹಿಂದಿನ ಕಾರಣವೇ ಸ್ವಾರಸ್ಯಕರವಾಗಿದೆ. ಮೊದಲೇ ಹೇಳಿದಹಾಗೆ ಅಲೆಕ್ಸಾಂಡ್ರಿಯಾಕ್ಕೆ ಹಲವಾರು ದೇಶಗಳಿಂದ ಯಾತ್ರಿಕರು, ವ್ಯಾಪಾರಸ್ತರು ಭೇಟಿಕೊಡುತ್ತಿದ್ದರು. ಹೀಗೆ ಭೇಟಿಕೊಟ್ಟ ಪ್ರತಿಯೊಂದು ಹಡಗನ್ನು ಹಾಗೂ ಪ್ರವಾಸಿಗಳನ್ನು ಅಲ್ಲಿನ ಸೈನಿಕರು ಕೂಲಂಕಷವಾಗಿ ತಪಾಸಣೆಗೊಳಪಡಿಸುತ್ತಿದ್ದರು. ಆವರ ಬಳಿ ಯಾವುದೇ ಪುಸ್ತಕ ದೊರೆತರೂ ಅದನ್ನು ಮುಟ್ಟುಗೋಲು ಹಾಕಿಕೊಂಡು ಗ್ರಂಥಾಲಯದ ಅಧಿಕಾರಿಗಳಿಗೆ ಒಪ್ಪಿಸಿಬಿಡುತ್ತಿದ್ದರು. ಗ್ರಂಥಾಲಯದವರು ಆ ಪುಸ್ತಕಗಳ ಪ್ರತಿಗಳನ್ನು ತಯಾರಿಸಿ, ಅವುಗಳನ್ನು ಅದರ ಮಾಲೀಕರಿಗೆ ಹಿಂತಿರುಗಿಸಿ, ಮೂಲ ಪ್ರತಿಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಇದು ಅವರ ಜ್ಞಾನ ದಾಹ ಎಂಥದಿತ್ತು ಎಂಬುದನ್ನು ತೋರಿಸುತ್ತದೆ. ಹೀಗೆ ಅಲೆಕ್ಸಾಂಡ್ರಿಯಾದ  The Royal Library ಯಲ್ಲಿ ಇಡೀ ವಿಶ್ವದ ಜ್ಞಾನ-ಭಂಡಾರವೇ ಸಂಗ್ರಹಗೊಂಡಿತ್ತು ಎಂದು ಹೇಳಬಹುದು.

ಈ ಲೈಬ್ರರಿಗಾಗಿ ಎರಾಟೋಸ್ತಿನಿಸ್, ಅಪೊಲೋನಿಯಸ್, ಅರಿಸ್ಟಾರ್ಕಸ್ ರಂತಹ ಮೇಧಾವಿಗಳು ಕೆಲಸ ಮಾಡಿದರು. ಟೋಲೆಮಿ ವಂಶದ ಆಡಳಿತಾವಧಿಯಲ್ಲಿ ವಿಜ್ಞಾನ ಮತ್ತು ಗಣಿತ ಕ್ಷೇತ್ರದಲ್ಲಿ ನಡೆದ ಸಂಶೋಧನೆಗಳು ನಿಜಕ್ಕೂ ಅದ್ಭುತ. ಉದಾಹರಣೆಗೆ ಏರಾಟೋಸ್ತಿನೀಸ್ - ಭೂಮಿಯ ಮೇಲೆ ಸೂರ್ಯನ ಬೆಳಕು ಉಂಟುಮಾಡುವ ನೆರಳುಗಳನ್ನು ಅಳೆದೇ ಭೂಮಿಯ ಸುತ್ತಳತೆಯನ್ನು ನಿಖರವಾಗಿ ಕಂಡುಹಿಡಿದಿದ್ದ! ಹೆರೋಫೈಲಸ್ ಎಂಬ ವೈದ್ಯ- ಅಲ್ಲಿಯವರೆಗೂ ಜನ ನಂಬಿಕೊಂಡು ಬಂದಿದ್ದರ ತದ್ವಿರುದ್ಧವಾಗಿ “ಮನುಷ್ಯನ ಬುದ್ಡಿ ಹೃದಯದಲ್ಲಲ್ಲ ಮಿದುಳಲ್ಲಿದೆ” ಎಂದು ಪ್ರತಿಪಾದಿಸಿದ. ಅಪೊಲೋನಿಯಸ್ ಎಂಬ ಗಣಿತಜ್ಞ ನಾವು ಇಂದಿಗೂ ಶಾಲೆಯಲ್ಲಿ ಗಣಿತದಲ್ಲಿ ಕಲಿಯುವ  conic  sections (Hyperbola, Parabola, Ellipse)  ಗಳನ್ನು ಕಂಡುಹಿಡಿದ. ಯೂಕ್ಲಿಡ್ ಎಂಬ ಗಣಿತಜ್ಞ ರೇಖಾಗಣಿತವನ್ನು ಶಾಸ್ತ್ರಬದ್ಧಗೊಳಿಸಿದ. ಸೂರ್ಯಕೇಂದ್ರಿತ ಸಿದ್ಧಾಂತವನ್ನು ಮೊದಲ ಬಾರಿಗೆ ಪ್ರತಿಪಾಸಿದ ವ್ಯಕ್ತಿ ಕೋಪರ್ನಿಕಸನಲ್ಲ, ಬದಲಿಗೆ ಇದೇ ಅಲೆಕ್ಸಾಂಡ್ರಿಯಾದ ಅರಿಸ್ಟಾರ್ಕಸ್ ಎಂಬ ಗಣಿತಜ್ಞ ಎಂದು ತಿಳಿದಾಗ ನಿಜಕ್ಕೂ ಆಶ್ಚರ್ಯವಾಗುತ್ತದೆ. ಅರಿಸ್ಟಾರ್ಕಸ್ ನ ಈ ವಾದದ ಬಗ್ಗೆ ಅರ್ಕೆಮಿಡೀಸನು ತನ್ನ ಪುಸ್ತಕವೊಂದರಲ್ಲಿ ಬರೆದುಕೊಂಡಿದ್ದಾನೆ.

ಸುಮಾರು ಎರಡರಿಂದ ಐದು ಲಕ್ಷಗಳಷ್ಟು ಪುಸ್ತಕಗಳನ್ನು ಹೊಂದಿದ್ದ ಅಲೆಕ್ಸಾಂಡ್ರಿಯಾದ ಲೈಬ್ರರಿಯು ಯುದ್ಧದ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿಗಾಹುತಿಯಾಯಿತು. ಅದು ಜೂಲಿಯಸ್ ಸೀಜರನ ಕಾಲ. ರೋಮಿನ ಅಧಿಪತ್ಯಕ್ಕಾಗಿ ಸೀಜರ್ ಮತ್ತು ಪಾಂಪೆಯ್ ನಡುವೆ ಯುದ್ಧವಾಯಿತು. ಸೀಜರನ ಬಲ ಹೆಚ್ಚಾದಾಗ ಪಾಂಪೆಯ್ ಅಲ್ಲಿಂದ ಓಡಿಹೋಗಿ ಅಲೆಕ್ಸಾಂಡ್ರಿಯಾದಲ್ಲಿ ರಾಜಕೀಯ ಆಶ್ರಯ ಪಡೆದ. ಅವನನ್ನಟ್ಟಿಸಿಕೊಂಡು ಬಂದ ಸೀಜರ್ ಅಲೆಕ್ಸಾಂಡ್ರಿಯಾದ ಪ್ರತಿರೋಧವನ್ನೆದುರಿಸಬೇಕಾಯಿತು. ಈ ಯುದ್ಧದ ಸಂದರ್ಭದಲ್ಲಿ ಸೀಜರ್ ತನ್ನ ಹಡಗುಗಳಿಗೇ ಬೆಂಕಿ ಹಚ್ಚಿ ಅಲೆಕ್ಸಾಂಡ್ರಿಯಾದ ಬಂದರಿಗೆ ನುಗ್ಗಿಸಿದ. ಅಪಾರ ಉರುವಲು ಪದಾರ್ಥ ಹೊತ್ತ ಹಡಗುಗಳು ಬಂದರಿಗಪ್ಪಳಿಸಿದಾಗ ಬಂದರಿಗೆ ಸಮೀಪವಿರುವ ಎಲ್ಲಾ ಕಟ್ಟಡಗಳಿಗೂ ಬೆಂಕಿ ಹತ್ತಿಕೊಂಡಿತು. ಬಂದರಿನ ಸಮೀಪವೇ ಇದ್ದ ಲೈಬ್ರರಿ, ಅರಮನೆ, ಹಾಗೂ ವಿದ್ಯಾಕೇಂದ್ರಗಳೆಲ್ಲವೂ ಬೆಂಕಿಗಾಹುತಿಯಾಯಿತು. ಎರಡು ಶತಮಾನಗಳವರೆಗೂ ನಿರಂತರವಾಗಿ ಸಂಗ್ರಹವಾಗಿದ್ದ ಜ್ಞಾನ-ಭಂಡಾರ ಕ್ಷಣ ಮಾತ್ರದಲ್ಲಿ ಬೂದಿಯ ರಾಶಿಯಾಗಿ ಬಿದ್ದಿತ್ತು. ಒಂದು ವೇಳೆ ನಮಗೆ ಈ ಪುಸ್ತಕಗಳೆಲ್ಲವು ದೊರೆತಿದ್ದರೆ ಇಂದು ನಾವು ಶಾಲೆಗಳಲ್ಲಿ ಓದುವ ಇತಿಹಾಸವೇ ಬೇರೆಯಾಗಿರುತ್ತಿತ್ತೇನೋ ಅನಿಸುತ್ತದೆ.

ಅಲೆಕ್ಸಾಂಡ್ರಿಯಾದಲ್ಲಿದ್ದದ್ದು ಕೇವಲ ಇದೊಂದೇ ಲೈಬ್ರರಿಯಲ್ಲ.  ಕ್ರಿ.ಪೂ. ಒಂದನೇ ಶತಮಾನದ ದ್ವಿತೀಯಾರ್ಧದಲ್ಲಿ, ಗ್ರೀಕರ ಸೆರಾಪಿಸ್ ದೇವತೆಯ ದೇವಸ್ಥಾನವಾದ ಸೆರಾಪಿಯಂ ನಲ್ಲಿ, ಇನ್ನೊಂದು ಮರಿ ಲೈಬ್ರರಿಯಿತ್ತು ಎಂದು ಇತಿಹಾಸಕಾರರು ಹೇಳುತ್ತಾರೆ. ಸಾಮಾನ್ಯವಾಗಿ ಇದನ್ನು The Daughter Library ಎಂದೇ ಕರೆಯಲಾಗುತ್ತದೆ. ಇಲ್ಲಿ ಎರಡು ಲಕ್ಷ ಪುಸ್ತಕಗಳಿದ್ದಿರಬಹುದು ಎಂದು ಕೆಲವರು ಹೇಳುತ್ತಾರೆ. ಈ ಲೈಬ್ರರಿಗಾಗಿ ಸೀಜರ್ ನ ಸೈನ್ಯಾಧಿಕಾರಿ ಅಂಟೋನಿಯೋ ಈಜಿಪ್ಟಿನ ರಾಣಿ ಕ್ಲಿಯೋಪಾತ್ರಾಗೆ ಎರಡು ಲಕ್ಷ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿದ್ದ ಎಂಬ ದಂತ ಕಥೆಯೂ ಇದೆ. ಆದರೆ ಈ ಕಥೆಯಲ್ಲಿ ಎಳ್ಳಷ್ಟೂ ಹುರುಳಿಲ್ಲ, ಇಲ್ಲಿ ಅಷ್ಟು ಪುಸ್ತಕಗಳು ಹಿಡಿಸುವಷ್ಟು ಸ್ಥಳವಿರಲಿಲ್ಲ ಎಂದು ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ. ಹೆಚ್ಚೆಂದರೆ ಈ ಲೈಬ್ರರಿಯಲ್ಲಿ ನಲವತ್ತು ಸಾವಿರದಷ್ಟು ಪುಸ್ತಕಗಳಿರಬಹುದು ಎಂದು ಹೇಳುತ್ತಾರೆ. ಈ ಸಂಖ್ಯೆಯೂ, ಜಗತ್ತಿನ ಅಂದಿನ ಇತರ ಲೈಬ್ರರಿಗಳಿಗೆ ಹೋಲಿಸಿದರೆ, ಆಗಿನ ಅತಿ ದೊಡ್ಡ ಲೈಬ್ರರಿಯಾಗಿತ್ತೆಂದೇ ಹೇಳಬಹುದು. ಈ ಲೈಬ್ರರಿ ಸುಮಾರು ಕ್ರಿ.ಶ. ೩೬೦ ರ ವರೆಗೂ ಅಸ್ತಿತ್ವದಲ್ಲಿತ್ತು. ಆ ಕಾಲದ ಹೆಸರಾಂತ ತತ್ವಶಾಸ್ತ್ರಜ್ಞೆ ಹೈಪೇಶಿಯ ಎಂಬ ಮಹಿಳೆಯು ಸೆರಾಪಿಯಂ ಲೈಬ್ರರಿಯ ಕೊನೆಯ ಅಧಿಕಾರಿಯಗಿ ಕಾರ್ಯ ನಿರ್ವಹಿಸಿದಳು. ಗಣಿತ, ತತ್ವಶಾಸ್ತ್ರ, ಹಾಗೂ ಖಗೋಳಶಾಸ್ತ್ರಗಳಂತಹ ವಿಷಯಗಳಲ್ಲಿ ಪಾರಂಗತಳಾಗಿದ್ದಳು. ಅವಳ ಪ್ರವಚನಗಳನ್ನು ಕೇಳಲು ದೂರದ ದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ತನ್ನ ಬುದ್ಧಿವಂತಿಕೆ, ಸೌಂದರ್ಯ ಮತ್ತು ಧೈರ್ಯಗಳಿಗೆ ಪ್ರಸಿದ್ಧಿ ಪಡೆದಿದ್ದಳು.
      
    
ಈ ಲೈಬ್ರರಿಯ ಅಂತ್ಯದ ಕಥೆಯಂತೂ ಅತ್ಯಂತ ದಾರುಣವಾಗಿದೆ. ಆಗಿನ ರೋಮ್ ಚಕ್ರವರ್ತಿ ಥಿಯೋಡೋಸಿಯಸ್ ಕ್ರೈಸ್ತ ಧರ್ಮವನ್ನು ತನ್ನ ರಾಜ್ಯದ ಅಧಿಕೃತ ಧರ್ಮವನ್ನಾಗಿ ಘೋಷಿಸುತ್ತಾನೆ. ಥಿಯೋಫೈಲಸ್ ಎಂಬ ಕ್ರೈಸ್ತ ಪಾದ್ರಿ ಅಲೆಕ್ಸಾಂಡ್ರಿಯಾ ನಗರದ ಆಡಳಿತಾಧಿಕಾರಿಯಾಗಿದ್ದ. ಈತ ಥಿಯೋಡೋಸಿಯಸ್ ನ ಆದೇಶದ ಮೇರೆಗೆ ಗ್ರೀಕ್ ಸಂಸ್ಕೃತಿಗೆ ಸೇರಿದ ಎಲ್ಲಾ ದೇವಾಲಯಗಳನ್ನು ನಾಶಗೊಳಿಸಲು ಆದೇಶ ಕೊಡುತ್ತಾನೆ. ರೋಮ್ ಸೈನಿಕರು ಸೆರಾಪಿಯಂ ದೇವಸ್ಥಾನಕ್ಕೆ ಬೆಂಕಿಯಿಡುಯುತ್ತಾರೆ.ದೇವಸ್ಥಾನದೊಂದಿಗೆ ಲೈಬ್ರರಿಯೂ ಸುಟ್ಟು ಬೂದಿಯಾಗುತ್ತದೆ. ದಾರಿಯಲ್ಲಿ ತನ್ನ ರಥದಲ್ಲಿ ಹೋಗುತ್ತಿದ್ದ ಹೈಪೇಶಿಯಾಳನ್ನು ಕ್ರೈಸ್ತ ಮತಾಂಧರ ಗುಂಪೊಂದು ಅಡ್ಡಗಟ್ಟುತ್ತದೆ. ಅವಳನ್ನು ರಥದಿಂದ ಹೊರಗೆಳೆದು, ಇಗರ್ಜಿಗೆ ದರ ದರನೆ ಎಳೆದುಕೊಂಡು ಹೋಗುತ್ತಾರೆ. ಜಗತ್ತಿಗೆಲ್ಲಾ ಶಾಂತಿ ಸಂದೇಶ ಸಾರಿದ ಏಸುವಿನ ಮೂರ್ತಿಯ ಸಮ್ಮುಖದಲ್ಲೇ ಅವಳನ್ನು ವಿವಸ್ತ್ರಗೊಳಿಸಿ, ಹರಿತವಾದ ಮಡಕೆಯ ಚೂರುಗಳಿಂದ ಅವಳ ಚರ್ಮ ಸುಲಿದು, ಆಕೆ ಜೀವಂತವಿರುವಾಗಲೇ ಬೆಂಕಿ ಹಚ್ಚಿ, ಭೀಕರವಾಗಿ ಹತ್ಯೆ ಮಾಡಲಾಗುತ್ತದೆ. ಹೈಪೇಶಿಯಾಳನ್ನು  Witch Hunt ನೆಪದಲ್ಲಿ ಬಲಿಯಾದ ಅಸಂಖ್ಯಾತ ಮಹಿಳೆಯರಲ್ಲಿ ಮೊದಲಿಗಳು ಎಂದರೆ  ತಪ್ಪಾಗಲಾರದು.
ಹೈಪೇಶಿಯಾ


ಹೀಗೊಂದು ಅದ್ಭುತ ಸಂಸ್ಕೃತಿಯು ಧರ್ಮ, ರಾಜಕೀಯ ಹಾಗೂ ಮತಾಂಧತೆಗಳ ನಡುವೆ ಸಿಲುಕಿ ಸರ್ವನಾಶವಾಗುತ್ತದೆ. ಈ ಕಾರಣಗಳಿಗಾಗಿಯೇ ನಾನು, ಒಂದು ವೇಳೆ ಈ ನಾಗರೀಕತೆಯು ಆಬಾಧಿತವಾಗಿ ಬೆಳೆದಿದ್ದರೆ, ವೈಜ್ಞಾನಿಕ ಕ್ರಾಂತಿಗಾಗಿ ಕೋಪರ್ನಿಕಸ್ ವರೆಗೂ ಕಾಯಬೇಕಾಗುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ಹೇಳಿದ್ದು. ಒಂದು ರೀತಿಯಲ್ಲಿ ಅಲೆಕ್ಸಾಂಡ್ರಿಯಾದ ಪತನದಿಂದ ವಿಶ್ವ-ನಾಗರಿಕತೆ ಸಾವಿರ ವರ್ಷಗಳಷ್ಟು ಅಮೂಲ್ಯ ಸಮಯವನ್ನು ಕಳೆದುಕೊಂಡಿತೆಂದೇ ವಿಜ್ಞಾನದ ಇತಿಹಾಸಕಾರರು ಅಭಿಪ್ರಾಯ ಪಡುತ್ತಾರೆ.ಇದಕ್ಕೆಲ್ಲಾ ಮೂಕ ಸಾಕ್ಷಿಯೆಂಬಂತೆ ಲೈಟ್ ಹೌಸ್ ಇಂದಿಗೂ ಅಲೆಕ್ಸಾಂಡ್ರಿಯಾದಲ್ಲಿ ಮೌನವಾಗಿ ನಿಂತಿದೆ.
 ಅಲೆಕ್ಸಾಂಡ್ರಿಯಾದ   ಲೈಟ್  ಹೌಸ್ (ಕಲಾವಿದನ ಕಲ್ಪನೆಯಲ್ಲಿ)

ಇಂದು ನಾವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದೇವೆ, ಕಲೆ, ರಾಜಕೀಯ ರಂಗಗಳಲ್ಲೂ ಉದಾತ್ತ ಚಿಂತನೆಗಳನ್ನು ಹೊಂದಿರತಕ್ಕಂತಹ ಮೌಲ್ಯಗಳನ್ನು ಹಲವು ದಾರ್ಶನಿಕರು ನಮ್ಮ ಮುಂದಿಟ್ಟಿದ್ದಾರೆ. ಆದರೂ ಹಿಟ್ಲರ್ ನಂತಹವರ ಆಡಳಿತದಲ್ಲಿ ಸಿಗ್ಮಂಡ್ ಫ್ರಾಯ್ಡ್ ರವರ ಪುಸ್ತಕಗಳನ್ನು ಸುಟ್ಟಾಗ, ಐನ್ ಸ್ಟೈನ್ ನಂತಹ ವಿಜ್ಞಾನಿಗಳು ಜೀವಕ್ಕೆ ಹೆದರಿ ತಮ್ಮ ತಾಯಿನೆಲವನ್ನೇ ತೊರೆದು ಪರದೇಶದಲ್ಲಿ ಆಶ್ರಯ ಪಡೆದಾಗ, ಸತ್ಯ ಹೇಳಿದ್ದಕ್ಕಾಗಿ ಇಂದಿಗೂ ಹಲವು ಲೇಖಕರ ಹಾಗೂ ಚಿಂತಕರ ಮೇಲೆ ಧಾರ್ಮಿಕ ಹಾಗೂ ರಾಜಕೀಯ ಶಕ್ತಿಗಳು ಹಲ್ಲೆ ನಡೆಸಿದಾಗ ನಾವು ಇತಿಹಾಸದಿಂದ ಏನೇನೂ ಪಾಠ ಕಲಿತಿಲ್ಲವೇನೋ ಅನಿಸಿಬಿಡುತ್ತದೆ. ಧಾರ್ಮಿಕ ಮತಾಂಧತೆ ಹಾಗೂ ರಾಜಕೀಯ ಸ್ವಾರ್ಥಗಳು ಮತ್ತೊಂದು ಲೈಬ್ರರಿಯನ್ನು ಅಥವಾ ಮತ್ತೊಬ್ಬ ಹೈಪೇಶಿಯಾಳನ್ನು ಬಲಿ ತೆಗೆದುಕೊಳ್ಳದೇ ಇರುವಹಂತಹ ಸಮಾಜವನ್ನು ಸೃಷ್ಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೇ?



No comments:

Post a Comment