ಕೆಲವರಿರುತ್ತಾರೆ ಅವರಿಗೆ ಕೆಲವು ಘಟನೆಗಳ ಹಿಂದಿನ ರಹಸ್ಯಗಳು ಬಗೆಹರಿಯದಿದ್ದರೇನೇ ಸಂತೋಷ. ಎಲ್ಲಾ ಸಂಗತಿಗಳೂ ಸ್ಪಟಿಕದಷ್ಟೇ ಸ್ಪಷ್ಟವಾಗಿಬಿಟ್ಟರೆ ಜೀವನದಲ್ಲಿ ಇನ್ನೇನೂ ಸ್ವಾರಸ್ಯ ಇರೋಲ್ಲ ಅಲ್ವ? ಹಾಗೆಂದೇ ಇವರು ವಿಜ್ಞಾನಿಗಳು ಕೆಲವು ಸಂಗತಿಗಳನ್ನು ಎಷ್ಟೇ ಸ್ಪಷ್ಟವಾಗಿ ವಿವರಿಸಿದರೂ ಅದನ್ನು ಒಪ್ಪದೆ ಅದರಲ್ಲಿ ಮತ್ತಿನ್ನೇನೋ ರಹಸ್ಯವನ್ನು ಹುಡುಕುತ್ತಿರುತ್ತಾರೆ. "ಇದು ಇಷ್ಟು ಸರಳವೇ?... ಸಾಧ್ಯವೇ ಇಲ್ಲ… ಇದರಲ್ಲಿ ಬೇರೆ ಇನ್ನೇನೋ ಇರಬೇಕು" ಎಂದು ವಾದಿಸುತ್ತಾರೆ. ಇವು UFO ಗಳ ವಿಚಾರವಾಗಿರಬಹುದು, ಬರ್ಮುಡಾ ಟ್ರೈಯಾಂಗಲ್ ವಿಚಾರವಾಗಿರಬಹುದು ಅಥವಾ ಡಾರ್ವಿನ್ನಿನ ವಾದವನ್ನು ತಳ್ಳಿ ಹಾಕುವಂತಹ ಸಾಕ್ಷಿಗಳಿವೆಯೆನ್ನುವಂತಹ ವಿಚಾರಗಳೇ ಆಗಿರಬಹುದು. ಇವೆಲ್ಲವುಗಳನ್ನು ವಿಜ್ಞಾನಿಗಳು ಎಷ್ಟೇ ಸ್ಪಷ್ಟವಾಗಿ ಬಿಡಿಸಿ ಹೇಳಿದರೂ ಇವನ್ನು ಇನ್ನೂ ಬಗೆಹರಿಯದ ರಹಸ್ಯಗಳೆಂಬಂತೆ ನಮ್ಮ ಮಾಧ್ಯಮಗಳು ವಿಜೃಂಭಿಸುತ್ತಿರುವುದೇಕೆ? ದಿನಕ್ಕೊಂದರಂತೆ ಇಂತಹ ಇಲ್ಲದ ರಹಸ್ಯಗಳನ್ನು ಹುಟ್ಟು ಹಾಕುವುದರ ಹಿಂದಿನ ಉದ್ದೇಶವೇ ನನಗೊಂದು ರಹಸ್ಯವಾಗಿ ಉಳಿದಿದೆ!
ಜೂನ್ 30, 1908 ರಲ್ಲಿ ನಡೆದ ತುಂಗುಸ್ಕಾ ಘಟನೆಯೊಂದಿಗೆ ತಳಕು ಹಾಕಿಕೊಂಡ ಊಹಾಪೋಹಗಳು ಇದಕ್ಕೆ ಸೂಕ್ತ ಉದಾಹರಣೆಯಾಗಬಲ್ಲುದು. ಕೆಲ ವರ್ಷಗಳ ಹಿಂದೆ ಖ್ಯಾತ ಅಮೇರಿಕನ್ ಭೌತ ವಿಜ್ಞಾನಿ ಕಾರ್ಲ್ ಸಗಾನ್ ಅವರ 'ಕಾಸ್ಮೋಸ್'’ ಎಂಬ ಪುಸ್ತಕವನ್ನೋದಿದ್ದೆ. ಇದೇ ಹೆಸರಿನಲ್ಲಿ ಅವರು ಒಂದು ಟೆಲಿ-ಸೀರೀಸ್ ಸಹ ನಿರ್ಮಿಸಿದ್ದರು. ಎಂಬತ್ತರ ದಶಕದಲ್ಲಿ ಬರೆದಿದ್ದ ಈ ಪುಸ್ತಕದಲ್ಲಿ ಕಾರ್ಲ್ ಸಗಾನ್ ಯಾವುದೇ ಅನುಮಾನಗಳಿಗೆ ಎಡೆ ಮಾಡಿಕೊಡದೆ ಈ ಘಟನೆಯು ಏಕಾಯಿತು, ಹೇಗಾಯಿತು ಎಂದು ವಿವರಿಸಿದ್ದಾರೆ. ಅವರೊಬ್ಬರೇ ಅಲ್ಲಾ ಹಲವಾರು ವಿಜ್ಞಾನಿಗಳು ಈ ಘಟನೆಯ ಬಗ್ಗೆ ಇಂತಹುದೇ ಅಭಿಪ್ರಾಯಕ್ಕೆ ಬಂದಿದ್ದಾರೆ. ಅದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳನ್ನೂ ಒದಗಿಸಿದ್ದಾರೆ. ಆದರೂ ಹಲವಾರು ಟಿ.ವಿ ಚಾನಲ್ ಗಳಲ್ಲಿ " ತುಂಗುಸ್ಕಾ ಘಟನೆ ಒಂದು ಬಗೆಹರಿಯದ ರಹಸ್ಯ..." ಅಂತೆಲ್ಲಾ ಇನ್ನೂ ಈ ಹಳಸಿದ ವಿಷಯವನ್ನೇ ಮತ್ತೆ ಮತ್ತೆ ವೀಕ್ಷಕರಿಗೆ ಉಣಬಡಿಸುತ್ತಿದ್ದಾರೆ.
ಬೆಳಗ್ಗೆ ಸುಮಾರು 7 ಗಂಟೆಯ ಸಮಯ. ಊರು ಈಗ ತಾನೆ ಎದ್ದು ದಿನದ ಚಟುವಟಿಕೆಗಳಿಗೆ ತಯಾರಾಗುತ್ತಿತ್ತು. ಸ್ಥಳ : ತುಂಗುಸ್ಕಾ ನದಿಯ ಹತ್ತಿರವಿರುವ ‘ವನವಾರ’’ ಎಂಬ ಪುಟ್ಟ ಹಳ್ಳಿ. ಸೆಮೆನೊವ್ ಎಂಬಾತ ತನ್ನ ಮನೆಯ ಮುಂದಿನ ಕಟ್ಟೆಯ ಮೇಲೆ ಬೆಳಗಿನ ತಿಂಡಿಗಾಗಿ ಕಾಯುತ್ತಾ ಕುಳಿತಿದ್ದ. ಇದ್ದಕ್ಕಿದ್ದಂತೆ ಅವನಿಗೆ ಉತ್ತರ ದಿಕ್ಕಿನಲ್ಲಿ ಆಕಾಶವು ಸೀಳಿದಂತೆ ಕಂಡಿತು.ಆ ಸೀಳು ಅಗಲವಾಗುತ್ತಾ ಹೋದಂತೆ ಭಯಂಕರವಾದ ಬೆಂಕಿಯ ಉಂಡೆಯೊಂದು ಅದರ ಮಧ್ಯದಿಂದ ಪ್ರತ್ಯಕ್ಷವಾಯಿತು. ಭೂಮಿ ತಲುಪುವ ಮುನ್ನವೇ ಆಕಾಶದಲ್ಲಿ ಅದು ಭಯಂಕರವಾಗಿ ಸ್ಫೋಟಗೊಂಡಿತು. ಆ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಸ್ಫೋಟ-ಕೇಂದ್ರದಿಂದ ಸುಮಾರು ನಲವತ್ತು ಮೈಲಿ ದೂರದಲ್ಲಿ ಕುಳಿತಿದ್ದ ಸೆಮೆನೊವ್ ಕೆಲವು ಮೀಟರ್ ಗಳಷ್ಟು ಮೇಲೆ ಎಸೆಯಲ್ಪಟ್ಟ. ಅದು ಉಂಟು ಮಾಡಿದ ಉಷ್ಣತೆಯು ಸೆಮೆನೊವ್ ಗೆ ತನ್ನ ಬಟ್ಟೆಗಳೇ ಹೊತ್ತಿ ಉರಿಯುತ್ತಿರುವಂತೆ ಭಾಸವಾಯಿತು. ಈ ಸ್ಫೋಟದ ಹಿಂದೆಯೇ ಕಲ್ಲಿನ ಮಳೆ ಟಪ- ಟಪನೆ ಸದ್ದು ಮಾಡುತ್ತಾ ಸುರಿಯಿತು. ನೋಡ ನೋಡುತ್ತಲೇ ಸುಮಾರು ಎರಡು ಸಾವಿರ ಚದುರ ಕಿಲೋಮೀಟರ್ ತುಂಬಾ ಹರಡಿಕೊಂಡಿದ್ದ ಎಂಬತ್ತು ಲಕ್ಷ ಮರಗಳು ನಿರ್ನಾಮವಾಗಿಬಿಟ್ಟವು. ಈ ಸ್ಫೋಟ ಎಬ್ಬಿಸಿದ ಧೂಳು ಆಕಾಶದ ತುಂಬೆಲ್ಲಾ ಹರಡಿಕೊಂಡಿತು. ಈ ಧೂಳು ಸೂರ್ಯನ ಕಿರಣಗಳನ್ನು ಅದ್ಯಾವ ಪರಿ ಚದುರಿಸಿದುವೆಂದರೆ ಸಾವಿರಾರು ಮೈಲಿ ಪಶ್ಚಿಮಕ್ಕಿರುವ ಲಂಡನ್ನಿನಲ್ಲಿ ಮಧ್ಯರಾತ್ರಿಯಲ್ಲಿಯೂ ಯಾವುದೇ ವಿದ್ಯುದ್ದೀಪದ ಸಹಾಯವಿಲ್ಲದೆ ವೃತ್ತಪತ್ರಿಕೆಗಳನ್ನು ಓದಬಹುದಾಗಿತ್ತು. ಸ್ಫೋಟ-ಕೇಂದ್ರದಿಂದ ಉದ್ಭವಿಸಿದ ಅಲೆಯು ಭೂಮಿಯನ್ನು ಎರಡು ಬಾರಿ ಪ್ರದಕ್ಷಿಣೆ ಹಾಕುವಷ್ಟು ಶಕ್ತಿಶಾಲಿಯಾಗಿತ್ತು! ಈ ಸ್ಫೋಟವು ಅಮೇರಿಕವು ಹಿರೋಶಿಮದಲ್ಲಿ ಸ್ಫೋಟಿಸಿದ ಅಣು ಬಾಂಬಿಗಿಂತಲೂ ಸುಮಾರು ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು. ಇಂತಹ ಘಟನೆಯೇನಾದರು ಇಂದು ನಡೆದಿದ್ದರೆ ಇದು ಯಾವುದೋ ಖದೀಮ ದೇಶದವರು ಅಣು ಬಾಂಬನ್ನು ಸ್ಫೋಟಿಸಿರಬಹುದೆಂಬ ಊಹಾಪೋಹಗಳು ಸೃಷ್ಟಿಯಾಗುತ್ತಿತ್ತು ಹಾಗೂ ದೇಶಗಳ ನಡುವೆ ಅಣು ಯುದ್ಧ ಸಂಭವಿಸುವ ಪರಿಸ್ಥಿತಿ ಉದ್ಭವವಾಗುತ್ತಿತ್ತೇನೋ ಎನಿಸುತ್ತದೆ. ಅದೃಷ್ಟವಶಾತ್ ಆಗ ಮಾನವ ಇನ್ನೂ ಅಣು ಬಾಂಬನ್ನು ಕಂಡು ಹಿಡಿದಿರಲಿಲ್ಲ.
ಇಷ್ಟು ದೊಡ್ಡ ಸ್ಫೋಟ ಸಂಭವಿಸಿದರೂ ಮಾಸ್ಕೋದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿದ್ದ ಜಾರ್ ದೊರೆ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ದೂರದ ಸೈಬೇರಿಯಾದ ಕಾಡಿನಲ್ಲಿ ನಡೆದ ಘಟನೆಗೆ ಅವನಾದರೂ ಯಾಕೆ ತಲೆ ಬಿಸಿ ಮಾಡಿಕೊಳ್ಳಬೇಕು! ಈ ಬಗ್ಗೆ ಇಂಗ್ಲೆಂಡಿನ ಕೆಲವು ಪತ್ರಿಕೆಗಳು ಒಂದೆರಡು ದಿನ ತಮಗೆ ತೋಚಿದ್ದನ್ನು ಗೀಚಿ ಸುಮ್ಮನಾಗಿಬಿಟ್ಟವು. ಈ ಘಟನೆ ನಡೆದು ಸುಮಾರು ಹದಿಮೂರು ವರ್ಷಗಳ ನಂತರ ಅಂದಿನ ಸೋವಿಯೆತ್ ಸರ್ಕಾರವು ಇದರ ತನಿಖೆಗೆಂದು ಒಂದು ತಂಡವನ್ನು ನಿಯೋಜಿಸಿತು. ಲಿಯೋನಿಡ್ ಕ್ಯೂಲಿಕ್ ಎಂಬ ಖನಿಜ ಶಾಸ್ತ್ರಜ್ಞ ಈ ತಂಡದ ನಾಯಕನಾಗಿದ್ದ. ರಸ್ತೆ ತುಂಬಾ ದುರ್ಗಮವಾಗಿದ್ದರಿಂದ ಅವರಿಗೆ ಸ್ಫೋಟದ ಕೇಂದ್ರ ಸ್ಥಳ ತಲುಪುವುದು ಸಾಧ್ಯವಾಗಲಿಲ್ಲ. 1927 ರಲ್ಲಿ ಮತ್ತೆ ಹೆಚ್ಚಿನ ತಯಾರಿಯೊಂದಿಗೆ ತೆರಳಿದ ಅವರು ಆ ಸ್ಥಳ ತಲುಪುವಲ್ಲಿ ಯಶಸ್ವಿಯಾದರು.
ಘಟನಾಸ್ಥಳದಲ್ಲಿ ಕಂಡುಬಂದ ದೃಶ್ಯ- ಮರಗಳು ರೆಂಬೆ-ಕೊಂಬೆಗಳನ್ನು ಕಳಚಿಕೊಂಡು ಬಿದ್ದಿವೆ |
ಪ್ರಾರಂಭದಲ್ಲಿಅಲ್ಲಿನ ಜನರು ಸ್ಫೋಟ ಸಂಭವಿಸಿರಬಹುದಾದ ಕೇಂದ್ರ ಸ್ಥಳವನ್ನು ತೋರಿಸಲು ನಿರಾಕರಿಸಿದರು, ಕೊನೆಗೂ ಅವರನ್ನು ಒಪ್ಪಿಸಿ ಸ್ಥಳ ತಲುಪುವಲ್ಲಿ ಯಶಸ್ವಿಯಾದರು. ಅಲ್ಲಿ ಅವರು ನೋಡಿದ ದೃಶ್ಯ ದಿಗ್ಭ್ರಮೆ ಹುಟ್ಟಿಸುವಂತಹದ್ದಾಗಿತ್ತು. ಸುಮಾರು ಇಪ್ಪತ್ತು ಮೈಲಿ ವ್ಯಾಸವುಳ್ಳ ವೃತ್ತಾಕಾರ ರೂಪದಲ್ಲಿ ಸುಮಾರು ಎಂಬತ್ತು ಲಕ್ಷ ಮರಗಳು, ಕೇಂದ್ರದಿಂದ ವಿರುದ್ಧಾಭಿಮುಖವಾಗಿ, ರೆಂಬೆ-ಕೊಂಬೆ, ತೊಗಟೆಗಳನ್ನೆಲ್ಲಾ ಕಳಚಿಕೊಂಡು, ಸುಟ್ಟು ಮಲಗಿಬಿಟ್ಟಿದ್ದವು. ಕೇಂದ್ರ ಸ್ಥಳದಲ್ಲಿ ಮರಗಳು ಸುಟ್ಟು ಬೆತ್ತಲಾಗಿ ಎಲೆಕ್ಟ್ರಿಕ್ ಕಂಬಗಳಂತೆ ನಿಂತಿದ್ದವು. ಕ್ಯೂಲಿಕ್ ನ ತಂಡವು ಆ ಸ್ಥಳವನ್ನು ಕೂಲಂಕಷವಾಗಿ ಪರೀಕ್ಷಿಸಿ, ಘಟನೆಯ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಪಡೆದುಕೊಂಡು ತಮ್ಮ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದರು. ಆ ನಂತರ ಹಲವಾರು ತಂಡಗಳು ಘಟನೆಯ ಸ್ಥಳಕ್ಕೆ ಭೇಟಿ ನೀಡಿದವು ಹಾಗೂ ಈ ಮಹಾಸ್ಫೋಟದ ಹಿಂದಿನ ಕಾರಣಗಳ ಬಗ್ಗೆ ಹಲವಾರು ಊಹಾಪೋಹಗಳು ಹುಟ್ಟಿಕೊಂಡವು. ಈ ಬಗ್ಗೆ ಕೆಲವು ಪ್ರಮುಖ ವಾದಗಳನ್ನು(Theory) ಗಮನಿಸೋಣ-
1. ದೇವರ ಕೋಪ: ಸ್ಥಳೀಯರ ವಾದವೇನೆಂದರೆ– ಜಗತ್ತಿನಲ್ಲಿ ಪಾಪ ಕಾರ್ಯಗಳು ಹೆಚ್ಚಾಗಿರುವುದರಿಂದ ದೇವರು ಕೋಪಗೊಂಡು ಜನರನ್ನು ಶಿಕ್ಷಿಸಿದ್ದಾನೆನ್ನುವುದು. ಇದನ್ನು ವಾದ ಎನ್ನುವುದಕ್ಕಿಂತ ನಂಬಿಕೆ ಎನ್ನುವುದೇ ಸೂಕ್ತ. ಇಂತಹ ನಂಬಿಕೆಗಳ ಬಗ್ಗೆ ತಾರ್ಕಿಕ ವಿಷ್ಲೇಷಣೆ ನಡೆಸುವುದು ನನ್ನ ಈ ಲೇಖನದ ಉದ್ದೇಶವಲ್ಲ. ಅದನ್ನು ನಿಮ್ಮ ವಿವೇಚನೆಗೇ ಬಿಡುತ್ತೇನೆ.
2. ಕಪ್ಪು ರಂಧ್ರ (Back Hole): ಕೆಲವರ ಪ್ರಕಾರ ಅಸಾಧಾರಣ ದ್ರವ್ಯ ರಾಶಿ ಹಾಗೂ ಅತಿ ಚಿಕ್ಕ ವ್ಯಾಸವುಳ್ಳ ಕಪ್ಪು ರಂಧ್ರವೊಂದು ಭೂಮಿಯ ಮೂಲಕ ಹಾದು ಹೋಗಿದ್ದರಿಂದ ಹೀಗಾಗಿರಬಹುದೆಂದು ವಾದಿಸುತ್ತಾರೆ. ಒಂದು ವೇಳೆ ಹೀಗಾಗಿದ್ದರೆ ತುಂಗುಸ್ಕಾ ನದಿಯ ಕಣಿವೆಯಿಂದ ಪ್ರವೇಶಿಸಿದ ಕಪ್ಪು ರಂಧ್ರವು ಅಟ್ಲಾಂಟಿಕ್ ಸಮುದ್ರದಿಂದ ಹೊರ ಹೋಗಿರಬೇಕಾಗಿತ್ತು. ಆದರೆ ತುಂಗುಸ್ಕಾ ಕಣಿವೆಯಲ್ಲಿ ಕಂಡು ಬಂದ ಈ ತರಹದ ಯಾವುದೇ ವಿದ್ಯಮಾನವು ಅಟ್ಲಾಂಟಿಕ್ ಸಮುದ್ರದಲ್ಲಿ ಕಂಡು ಬರಲಿಲ್ಲ.
3. ಅನ್ಯಗ್ರಹ ಜೀವಿಗಳು: ಕೆಲವರ ಅಭಿಪ್ರಾಯದ ಪ್ರಕಾರ ಅನ್ಯಗ್ರಹ ಜೀವಿಗಳು ಭೂಮಿಗೆ ಭೇಟಿಕೊಟ್ಟಿರಬಹುದು ಹಾಗೂ ಪರಮಾಣು ಬಾಂಬನ್ನು ಸ್ಫೋಟಿಸಿರಬಹುದು ಎಂಬುದು. ತಮ್ಮ ಈ ವಾದಕ್ಕೆ ಅವರು ಮುಂದಿಡುವ ಸಾಕ್ಷಿಯೆಂದರೆ ಸ್ಫೋಟ ಹೊರಹೊಮ್ಮಿಸಿದ ಅಗಾಧ ಪ್ರಮಾಣದ ಶಕ್ತಿ ಹಾಗೂ ಆ ಸ್ಥಳದಲ್ಲಿ ಕಂಡು ಬಂದ ಸಸ್ಯಗಳ ಮೇಲಿನ ವಿಕಿರಣದ ಪ್ರಭಾವ.
ಅಣುಬಾಂಬ್ ಸ್ಫೋಟಗೊಂಡಾಗ ಅಗಾಧ ಪ್ರಮಾಣದ ವಿಕಿರಣ ಉಂಟಾಗುತ್ತದೆ ಹಾಗೂ ಆ ಕಾಲದಲ್ಲಿ ಅಣು ಬಾಂಬನ್ನು ಮಾನವ ಇನ್ನೂ ಕಂಡುಹಿಡಿದಿದ್ದಿಲ್ಲವಾದ್ದರಿಂದ ಇದು ಯಾವುದೋ ಅನ್ಯಗ್ರಹ ಜೀವಿಗಳ ಕೆಲಸವೇ ಆಗಿರಬೇಕೆಂದು ವಾದಿಸುತ್ತಾರೆ. ಈ ಸ್ಫೋಟದಲ್ಲಿ ಉತ್ಪತ್ತಿಯಾದ ಅಗಾಧ ಶಕ್ತಿಯೂ ಇದೊಂದು ಅಣುಬಾಂಬ್ ಸ್ಫೋಟವೇ ಆಗಿರಬೇಕು ಎಂದು ವಾದಿಸುತ್ತಾರೆ. ಆದರೆ ಈ ವಾದವು ಹಲವಾರು ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ- ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಅಣುಬಾಂಬನ್ನು ಏಕಾದರೂ ಸ್ಫೋಟಿಸಬೇಕು? ಈ ಸ್ಫೋಟದಲ್ಲಿ ಒಬ್ಬೇ ಒಬ್ಬ ವ್ಯಕ್ತಿಯೂ ಸಾಯಲಿಲ್ಲ. ಏಕೆಂದರೆ ಸ್ಫೋಟ ಭೂಮಿಗಿಂತ ಸುಮಾರು 5 ಕಿ.ಮೀ ಎತ್ತರದಲ್ಲಾಗಿತ್ತು. ಅನ್ಯಗ್ರಹ ಜೀವಿಗಳ ಉದ್ದೇಶವೇನೇ ಇರಲಿ, ಭೂಮಿಗೆ ಬಂದು ತಲುಪುವಷ್ಟು ಅದ್ಭುತ ತಂತ್ರಜ್ಞಾನವನ್ನು ಬೆಳೆಸಿಕೊಂಡವರು ಇಲ್ಲಿ ಬಾಂಬನ್ನು ಸ್ಫೋಟಿಸವುದರಲ್ಲಿ ಎಡವಟ್ಟು ಮಾಡಿಕೊಂಡಿದ್ದು ಅಸಹಜವೆನಿಸುವುದಿಲ್ಲವೇ? ಹಿರೋಶಿಮಾ ಸ್ಫೋಟದಲ್ಲಿ ವಿಕಿರಣದ ಪ್ರಭಾವದಿಂದಲೇ ಸಾವಿರಾರು ಜನ ಅಸು ನೀಗಿದರು. ಆದರೆ ಇದಕ್ಕೆ ಹೋಲಿಸಿದಾಗ ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದ್ದ ತುಂಗುಸ್ಕಾ ಸ್ಫೋಟದಲ್ಲಿ ಕಂಡು ಬಂದ ವಿಕಿರಣದ ಪ್ರಮಾಣ ಇಷ್ಟು ಕಡಿಮೆಯೇಕೆ?. ‘ಅನ್ಯಗ್ರಹ’ ವಾದಿಗಳ ಬಳಿ ಈ ಪ್ರಶ್ನೆಗಳಿಗೆ ಯಾವುದೇ ಉತ್ತರವಿಲ್ಲ.
4. ಉಲ್ಕಾ-ವಾದ- ಈ ವಾದ ನನಗೆ ಹೆಚ್ಚು ಸಮಂಜಸವೆನಿಸುತ್ತದೆ ಹಾಗೂ ವಿಜ್ಞಾನಿ ವಲಯದಲ್ಲಿ ಇದಕ್ಕೆ ಈವರೆಗೂ ಯಾವುದೇ ತಕರಾರು ಕಂಡು ಬಂದಿಲ್ಲ.
ಕಲಾವಿದನ ಕಲ್ಪನಾ ಚಿತ್ರ |
ನಮಗೆಲ್ಲಾ ತಿಳಿದಿರುವಂತೆ ನಮ್ಮ ಸೌರವ್ಯೂಹದಲ್ಲಿ ಗ್ರಹಗಳು, ಉಪಗ್ರಹಗಳು ಹಾಗು ಸಾವಿರಾರು ಧೂಮಕೇತುಗಳ ಜೊತೆಗೆ ಲಕ್ಷಾಂತರ ಉಲ್ಕೆಗಳು ಸಹ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕುತ್ತಿವೆ. ಈ ಉಲ್ಕೆಗಳ ಗಾತ್ರ ಕೆಲವೇ ಕೆಲವು ಸೆಂಟಿಮೀಟರ್ ಗಳಿಂದ ಹಿಡಿದು ಹಲವು ಮೈಲಿಗಳಷ್ಟಾಗಿರಬಹುದು. ಹಲವಾರು ಬಾರಿ ಈ ಉಲ್ಕೆಗಳು ಭೂಮಿಯ ಸಮೀಪ ಹಾದು ಹೋಗುವಾಗ ಭೂಮಿಯ ಗುರುತ್ವಾಕರ್ಷಣೆಗೆ ಸಿಲುಕಿ ವಾಯುಮಂಡಲವನ್ನು ಪ್ರವೇಶಿಸುತ್ತವೆ. ನಮ್ಮ ವಾಯುಮಂಡಲವು ಹಲವಾರು ರೀತಿಯಲ್ಲಿ ನಮಗೆ ಒಂದು ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ. ಈ ಉಲ್ಕೆಗಳು ಭೂಮಿಯನ್ನಪ್ಪಳಿಸುವುದನ್ನು ತಪ್ಪಿಸುವುದೇ ನಮ್ಮ ವಾಯುಮಂಡಲ. ಉಲ್ಕೆಗಳು ಭೂಮಿಗೆ ಹತ್ತಿರ ಬಂದಂತೆಲ್ಲಾ ಗುರುತ್ವ ಬಲವು ಹೆಚ್ಚಾಗಿ ಅಸಾಧಾರಣ ವೇಗ ಪಡೆದುಕೊಳ್ಳುತ್ತವೆ. ಈ ವೇಗದೊಂದಿಗೆ ಅವು ವಾಯುಮಂಡಲವನ್ನು ಪ್ರವೇಶಿಸಿದಾಗ ವಾಯುಮಂಡಲದೊಂದಿಗೆ ಘರ್ಷಣೆಯುಂಟಾಗಿ ತೀವ್ರ ಉಷ್ಣತೆಯುಂಟಾಗುತ್ತದೆ. ಈ ಉಷ್ಣತೆಯಿಂದಾಗಿ ಅವುಗಳ ಆಂತರಿಕ ಒತ್ತಡ ಹೆಚ್ಚಾಗಿ ಭೂಮಿ ತಲುಪುವ ಮುಂಚೆಯೇ ಸ್ಫೋಟಗೊಳ್ಳುತ್ತವೆ, ಹಲವಾರು ಬಾರಿ ನಮಗೆ ರಾತ್ರಿ ವೇಳೆ ಆಕಾಶದಲ್ಲಿ ನಕ್ಷತ್ರಗಳು ಬೀಳುತ್ತಿದ್ದಂತೆ ಭಾಸವಾಗುವುದಿಲ್ಲವೆ (Shooting Stars)? ಇವು ನಾನು ಮೇಲೆ ವಿವರಿಸಿದ ವಿದ್ಯಮಾನವಲ್ಲದೇ ಬೇರೇನೂ ಅಲ್ಲ.
ತುಂಗುಸ್ಕಾ ಸ್ಫೋಟವೂ ದೊಡ್ಡದಾದ ಉಲ್ಕೆಯೊಂದು ಭೂಮಿಯ ವಾಯುಮಂಡಲವನ್ನು ಪ್ರವೇಶಿಸಿದ್ದರಿಂದ ಸಂಭವಿಸಿತೆಂದು ವಿಜ್ಞಾನಿಗಳು ಹೇಳುತ್ತಾರೆ. ಇಲ್ಲಿ ಸ್ಫೋಟಗೊಂಡ ಉಲ್ಕೆಯ ದ್ರವ್ಯರಾಶಿ ಮತ್ತು ಸುತ್ತಳತೆ (ಸುಮಾರು 45 ಕಿಮೀ ಎಂದು ಅಂದಾಜಿಸಲಾಗಿದೆ) ಸಾಮಾನ್ಯಕ್ಕಿಂತ ಹೆಚ್ಚಾಗಿದ್ದುದರಿಂದ ಭೂಮಿಯ ಮೇಲ್ಮೈಗೆ ತೀರಾ ಹತ್ತಿರದಲ್ಲಿ ಸ್ಫೋಟಿಸಿತು. ಈ ಸ್ಫೋಟದಲ್ಲಿ ಸುಮಾರು 15 ಮೆಗಾ-ಟನ್ನಿನಷ್ಟು ಶಕ್ತಿ ಬಿಡುಗಡೆಯಾಯಿತು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಶಕ್ತಿಯು ಒಮ್ಮೆಲೇ ಬಿಡುಗಡೆಯಾದಲ್ಲಿ ವಿಕಿರಣದ ಸಾಧ್ಯತೆಯೂ ಇರುತ್ತದೆ ಎಂದು ಭೌತವಿಜ್ಞಾನಿಗಳು ಹೇಳುತ್ತಾರೆ. ಇಷ್ಟೇ ಅಲ್ಲದೆ ಘಟನಾ ಸ್ಥಳದಲ್ಲಿ ಸಣ್ಣ ಸಣ್ಣ ವಜ್ರದ ತುಣುಕುಗಳೂ ಹರಡಿಕೊಂಡಿರುವುದು ಕಂಡು ಬಂದಿದೆ. ಹಲವು ಉಲ್ಕೆಗಳಲ್ಲಿ ವಜ್ರ ಇರುವುದು ಖಾತ್ರಿಯಾಗಿದೆ. ಇನ್ನೊಂದು ಮುಖ್ಯ ವಿಷಯವೆಂದರೆ - ಘಟನೆಯ ಪ್ರತ್ಯಕ್ಷ ಸಾಕ್ಷಿಗಳು ಸ್ಫೋಟದ ಹಿಂದೆಯೇ ಕಲ್ಲಿನ ಮಳೆಯು ಟಪ-ಟಪ ಸದ್ದಿನೊಂದಿಗೆ ಸುರಿಯಿತು ಎಂದು ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದಾರೆ. ಇದು ಉಲ್ಕೆಯು ಸ್ಫೋಟಗೊಂಡಾಗ ಅದರ ತುಣುಕುಗಳು ಸುರಿದಿರಬೇಕು ಎಂಬುದನ್ನು ಸೂಚಿಸುತ್ತದೆ. ಇವೆಲ್ಲಾ ಸಾಕ್ಷಿಗಳನ್ನು ಗಮನಿಸಿದರೆ ಉಲ್ಕಾ-ವಾದವು ಹೆಚ್ಚು ಸರಳ ಹಾಗೂ ಅಪ್ಯಾಯಮಾನವಾಗಿ ಕಾಣುತ್ತದೆ.
ವಿಜ್ಞಾನದಲ್ಲಿ ಒಂದು ಸಂಗತಿಯ ಬಗ್ಗೆ ಹಲವು ವಾದಗಳು (Theory) ಹುಟ್ಟಿಕೊಂಡಾಗ ಅವುಗಳಲ್ಲಿ ಯಾವುದು ಸರಳವಾಗಿರುತ್ತದೋ ಹಾಗೂ ಆ ಸಂಗತಿಗೆ ಸಂಬಂಧಿಸಿದಂತಹ ಎಲ್ಲಾ ವಿದ್ಯಮಾನಗಳನ್ನು ಸಮಂಜಸವಾಗಿ ವಿವರಿಸುತ್ತದೋ ಅದನ್ನೇ ಸಾರ್ವತ್ರಿಕವಾಗಿ ಸ್ವೀಕರಿಸಲಾಗುತ್ತದೆ. ಈ ದೃಷ್ಟಿಯಿಂದ ನೋಡಿದರೆ, ಮೇಲೆ ಹೇಳಿದ ಎಲ್ಲಾ ವಾದಗಳಲ್ಲಿ ಉಲ್ಕೆ ಸ್ಫೋಟಗೊಂಡಿರಬಹುದಾದ ವಾದವನ್ನೇ ನಾವು ಆರಿಸಿಕೊಳ್ಳಬೇಕಾಗುತ್ತದೆ. ಏನಂತೀರಿ?
------ಕೇಪಿ
very well written. Could have given more introduction regarding the geographic location of that place
ReplyDeletevery nice article. let this writeup prove to be a deathknell to sensationalist manoevres of the vested interests. the progeny of william hearsts ( father of yellow press) are increasing arithematically. let people take ispiration through ur writings and snub these germs who feed on innocent people by leading them to the world of lies. ------guru
ReplyDeleteಬಹಳ ಚೆನ್ನಾಗಿದೆ
ReplyDeleteಮು೦ದುವರೆಸಿ