Sunday, April 17, 2011

ಕಾಸ್ಮಿಕ್ ಕ್ಯಾಲೆಂಡರ್


ಇಂಥದೊಂದು ಸನ್ನಿವೇಶವನ್ನು ಊಹಿಸಿಕೊಳ್ಳಿ : ಕ್ರಿಸ್ತಪೂರ್ವದ ಅವಧಿಯಲ್ಲಿ ಬದುಕಿದ್ದ ವ್ಯಕ್ತಿಯೊಬ್ಬ ಇದ್ದಕಿದ್ದಂತೆ ಯಾವುದೋ ಅತೀಂದ್ರಿಯ ಶಕ್ತಿಯ ಸಹಾಯದಿಂದ (ಊಹಿಸಿಕೊಳ್ಳಲಡ್ಡಿಯೇನಿಲ್ಲ) ಇಂದಿನ ಯುಗಕ್ಕೆ ಪ್ರವೇಶಿಸುತ್ತಾನೆ ಎಂದಿಟ್ಟುಕೊಳ್ಳಿ. ಅವನಿಗೆ ಈಗಿನ ಪ್ರಪಂಚ ಹೇಗೆ ಕಾಣಿಸೀತು? ಭರ ಭರನೆ ಶರವೇಗದಲ್ಲಿ ಓಡುವ ಕಾರು ಬಸ್ಸುಗಳು, ಆಗಸದಲ್ಲಿ ಹಾರಾಡುವ ವಿಮಾನಗಳು, ಗಗನಚುಂಬಿ ಕಟ್ಟಡಗಳು, ರಸ್ತೆಯುದ್ದಕ್ಕೂ ಸಾಲಾಗಿ ನಿಂತಿರುವ ಬೆಳಕು ಸೂಸುವ ವಿದ್ಯುದ್ದೀಪಗಳು, ನಿಯಾನ್ ಬೆಳಕಿನಲ್ಲಿ ಹೊಳೆಯುವ ಜಾಹಿರಾತು ಫಲಕಗಳು, ಟಿ.ವಿ, ಮೊಬೈಲ್, ಕ್ಯಾಮೆರಾ ಇತ್ಯಾದಿ ಇವನ್ನೆಲ್ಲಾ ನೋಡಿ ಅವನಿಗೇನನ್ನಿಸಬಹುದು? ತಾನೆಲ್ಲೋ ಭ್ರಮಾಲೋಕದಲ್ಲಿ ವಿಹರಿಸುತ್ತಿದ್ದೇನೆನಿಸಿದರೆ ಅಚ್ಚರಿಯೇನಿಲ್ಲ. ಇದೊಂದು ಅದ್ಭುತ ಲೋಕ, ಮಾನವ ಇದನ್ನೆಲ್ಲಾ ಸಾಧಿಸಲಾರ, ಇದರ ಹಿಂದೆ ಯಾವುದೋ ಮಾಂತ್ರಿಕ ಶಕ್ತಿಯ ಕೈವಾಡವಿರಬೇಕೆಂದೇ ಅವನಿಗನಿಸುತ್ತದೆ.

ನಾವೆಲ್ಲಾ ಶಾಲೆಗಳಲ್ಲಿ ಇತಿಹಾಸ ಓದಿರುವುದರಿಂದ ನಮ್ಮ ಇಂದಿನ ಬೆಳವಣಿಗೆಯ ಹಿಂದೆ ಮಾನವನ ಸಹಸ್ರಾರು ವರ್ಷಗಳ ಅಪಾರ ಪರಿಶ್ರಮವಿದೆಯೆಂದು ತಿಳಿದಿದ್ದೇವೆ . ನಾವು ಇದನ್ನೆಲ್ಲಾ ಗಳಿಗೆಯಲ್ಲಿ ಸಂಪಾದಿಸಿಲ್ಲ, ಹಂತ ಹಂತವಾಗಿ ಗಳಿಸಿದ್ದೇವೆ, ಈ ನಿಟ್ಟಿನಲ್ಲಿ ಹಲವು ಬಾರಿ ಬಿದ್ದು ಎದ್ದಿದ್ದೇವೆ. ಆದರೆ ಇದ್ಯಾವುದರ ಅರಿವಿಲ್ಲದ,  ಆಕಸ್ಮಿಕವಾಗಿ ಪುರಾತನ ಕಾಲದಿಂದ ಈ ಕಾಲಕ್ಕೆ ಜಿಗಿದು ಬಂದ ವ್ಯಕ್ತಿಗೆ ನಾವೊಂದಿಷ್ಟು ತಾಳ್ಮೆಯಿಂದ ಮಾನವ ಬೆಳೆದು ಬಂದ ಹಾದಿ,   ನಿಸರ್ಗದ ನಿಯಮಗಳು, ಹಾಗೂ ನಮ್ಮ ಯಂತ್ರಗಳ ಹಿಂದಿನ ತಂತ್ರಜ್ಞಾನವನ್ನು ಬಿಡಿಸಿ ಹೇಳಿದರೆ ಹಾಗೂ ಅವನೂ ತಾಳ್ಮೆಯಿಂದ ಇವುಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರೆ ಅವನ ಈ ಎಲ್ಲಾ ಸಂದೇಹಗಳನ್ನು ನಿವಾರಿಸಬಹುದು. ನಮಗೆ ಈ ವ್ಯಕ್ತಿ ಪೆದ್ದನಂತೆ ಕಾಣಬಹುದು. ಆದರೆ ಹಾಗೆ ಕರೆಯುವ ಮುನ್ನ,  ಆಧುನಿಕ ಯುಗದಲ್ಲಿ ಬದುಕುತ್ತಿರುವ ನಮ್ಮ ಪರಿಸ್ಥಿತಿ ಇದಕ್ಕಿಂತ ತುಂಬಾ ಹೆಚ್ಚೇನೂ ಭಿನ್ನವಿಲ್ಲ ಎಂಬುದನ್ನರಿಯಬೇಕು .

ಹಲವು ಕವಿಗಳು ಪ್ರಕೃತಿಯ ಸೌಂದರ್ಯಕ್ಕೆ ಹಾಗೂ ಅದರ ವೈವಿಧ್ಯತೆಗೆ ಮಾರು ಹೋಗಲಿಲ್ಲವೇ? ಪ್ರಕೃತಿಯ ಈ ಸೌಂದರ್ಯ ಮತ್ತು ವೈವಿಧ್ಯತೆಯ ಹಿಂದೆ ಕಾಣದ ಶಕ್ತಿಯ (ದೇವರ)  ಪ್ರೇರಣೆಯಿದೆ ಎಂದು ಹೇಳುವ ಆಧ್ಯಾತ್ಮಿಕ ಗುರುಗಳಿಲ್ಲವೇ? ಅವರನ್ನು ಬಿಡಿ ನಮಗೂ ಪ್ರಕೃತಿಯ ಸೊಬಗನ್ನು ನೋಡಿ ಹಲವಾರು ಪ್ರಶ್ನೆಗಳೇಳುತ್ತವೆ : ಜೇನ್ನೊಣಗಳಿಗೆ ಮತ್ತು ಗುಬ್ಬಿಗಳಿಗೆ ಅಷ್ಟೊಂದು ಕಲಾತ್ಮಕತೆಯಿಂದ ಹಾಗೂ ತಂತ್ರಗಾರಿಕೆಯಿಂದ ತಮ್ಮ ಗೂಡು ಕಟ್ಟಲು ಹೇಳಿಕೊಟ್ಟವರಾರು? ಬುದ್ಧಿವಂತಿಕೆಯಿಂದ ಹೊಂಚು ಹಾಕಿ ಬೇಟೆಯಾಡುವ ಪ್ರಾಣಿಗಳಿಗೆ ಹಾಗೆ ಹೊಂಚು ಹಾಕುವುದನ್ನು ಕಲಿಸಿ ಕೊಟ್ಟವರಾರು? ಪರಭಕ್ಷಿ ಪ್ರಾಣಿಗಳಿಗೆ ಬಲಿಯಾಗುವುದನ್ನು ತಪ್ಪಿಸಿಕೊಳ್ಳಲು ವಿವಿಧ ದೇಹರಚನೆ, ರೂಪ,  ಬಣ್ಣ ಹಾಗೂ ವಿನ್ಯಾಸವನ್ನು ಹೊಂದಿರುವ ಪ್ರಾಣಿಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ, ಈ ಪ್ರಾಣಿಗಳಿಗೆ ಈ ರೂಪ ಮತ್ತು ಬಣ್ಣ ಯಾವುದೋ ಅಗೋಚರ ಶಕ್ತಿ ದಯಪಾಲಿಸಿತೇ ಅಥವಾ ಆ ಪ್ರಾಣಿಗಳೇ ಪ್ರಜ್ಞಾಪೂರ್ವಕವಾಗಿ ಬೆಳೆಸಿಕೊಂಡವೇ?  ಸಸ್ಯಗಳೇನು ಕಡಿಮೆ : ಪರಾಗಸ್ಪರ್ಷಕ್ಕೆ ಅನುವಾಗಲೆಂದು ಕೀಟಗಳನ್ನು ಆಕರ್ಷಿಸುತ್ತವೆ, ಕೀಟಗಳನ್ನು ಆಕರ್ಷಿಸಲು ರಂಗುರಂಗಿನ, ವೈವಿಧ್ಯಮಯ ವಿನ್ಯಾಸಗಳನ್ನುಳ್ಳ ಹೂಗಳನ್ನು ಹೊಂದಿರುತ್ತವೆ, Give and Take policy ಎಂಬಂತೆ, ಕೀಟಗಳು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಅವುಗಳಿಗೆ ಸಿಹಿ ಸಿಹಿ ಮಕರಂದವನ್ನುಣಬಡಿಸುತ್ತವೆ ! ಇದೆಲ್ಲಾ ಹೇಗೆ ಸಾಧ್ಯ? ಒಂದೋ ಪ್ರಕೃತಿ ಪ್ರಜ್ಞಾಪೂರ್ವಕವಾಗಿ ಈ ಶಕ್ತಿಯನ್ನು ಪ್ರಾಣಿ ಮತ್ತು ಸಸ್ಯ ಸಂಕುಲಗಳಿಗೆ ದಯಪಾಲಿಸಿರಬೇಕು ಅಥವಾ ಯಾವುದೋ ಅಗೋಚರ ಚೇತನವೊಂದು ಈ ಅದ್ಭುತ ಜೀವ ಜಗತ್ತನ್ನು ರೂಪಿಸಿರಬಹುದು ಎಂಬ ಭಾವನೆ ನಮ್ಮಲ್ಲಿ ಮೂಡುವುದು ಸಹಜ. ಹೀಗೆ ಯೋಚಿಸುವುದಾದರೆ ನಾವೂ, ಪುರಾತನ ಕಾಲದಿಂದ ಇಂದಿನ ಕಾಲಕ್ಕೆ ಆಕಸ್ಮಿಕವಾಗಿ ಜಿಗಿದ ಆ ವ್ಯಕ್ತಿಗಿಂತ ಹೆಚ್ಚು ಭಿನ್ನವೇನಲ್ಲ ಅಲ್ಲವೇ? ಪ್ರಕೃತಿಯ ಈ ವೈವಿಧ್ಯಮಯ ಸೊಬಗಿನ ಹಿಂದಿರುವ ರಹಸ್ಯವನ್ನರಿಯಲು ನಾವೂ ಆ ವ್ಯಕ್ತಿಯಂತೆ ನಮ್ಮ ಭೂಮಿಯ, ಅದರ ಮೇಲೆ ಜೀವಿಸಿರುವ ಸಮಸ್ತ ಜೀವಸಂಕುಲಗಳ ಇತಿಹಾಸವನ್ನರಿಯಬೇಕಾಗುತ್ತದೆ.

ನಾವಿರುವ ಈ ಭೂಮಿ ತುಂಬಾ ಹಳೆಯದು ಅದರ ವಯಸ್ಸಿನ ಮುಂದೆ ಮಾನವನ ವಯಸ್ಸು ಈಗಷ್ಟೇ ಜನಿಸಿದ ಮಗುವಿಗೆ ಸಮ. ಸೂಕ್ಷ್ಮಜೀವಿಗಳಿಂದ ಹಿಡಿದು ಅದ್ಭುತ ಬುದ್ಧಿಮತ್ತೆ ಗಳಿಸಿದ ಮಾನವನ ವರೆಗೂ ನಡೆದ ಜೀವವಿಕಾಸಕ್ಕೆ ಪ್ರಕೃತಿ ತೆಗೆದುಕೊಂಡದ್ದು ಕೆಲವೇ ವರ್ಷಗಳಲ್ಲ, ಇದಕ್ಕೆ ನಮ್ಮ ಊಹೆಗೂ ನಿಲುಕದಷ್ಟು ಸಮಯ ಹಿಡಿದಿದೆ. ಇಂದು ಭೂಗರ್ಭ ಶಾಸ್ತ್ರದ ನೆರವಿನಿಂದ ಭೂಮಿಯ ವಯೋಮಾನವನ್ನು ಅಳೆಯಬಹುದಾಗಿದೆ, ಕಾರ್ಬನ್ ಡೇಟಿಂಗ್ ನ ನೆರವಿನಿಂದ ಪ್ರಾಣಿ ಹಾಗೂ ಸಸ್ಯಗಳ ಪಳೆಯುಳಿಕೆಗಳ ಕಾಲಮಾನವನ್ನು ತಿಳಿಯಲು ಸಾಧ್ಯವಾಗಿದೆ. ಸೂರ್ಯ, ನಕ್ಷತ್ರ, ಗೆಲಾಕ್ಸಿಗಳ ಹಾಗೂ ಬ್ರಹ್ಮಾಂಡದ ವಯೋಮಾನವನ್ನು ಖಗೋಳ ಶಾಸ್ತ್ರದ ನೆರವಿನಿಂದ ಕಂಡು ಹಿಡಿಯಬಹುದಾಗಿದೆ. ಭೂಮಿಯ ವಯಸ್ಸು ಸುಮಾರು 4.5 ಬಿಲಿಯ ವರ್ಷಗಳೆನ್ನಬಹುದು. ನಮ್ಮ ಸೂರ್ಯ ಸುಮಾರು 5 ಬಿಲಿಯ ವರ್ಷಗಳಷ್ಟು ಹಳೆಯದು. ಸೂರ್ಯನಿರುವ ಗೆಲಾಕ್ಸಿ ಮಿಲ್ಕಿವೇ ಗೆ ಸುಮಾರು  10 ಬಿಲಿಯ ವರ್ಷಗಳಷ್ಟು ವಯಸ್ಸು. ನಾವು ಬಿಗ್ ಬ್ಯಾಂಗ್  ಸಿದ್ಧಾಂತವನ್ನು ಒಪ್ಪುವುದಾದರೆ (ಒಪ್ಪಲು ಸಾಕಷ್ಟು ಪುರಾವೆಗಳಿವೆ) ಬ್ರಹ್ಮಾಂಡ ಜನ್ಮ ತಳೆದದ್ದು ಸುಮಾರು 15 ಬಿಲಿಯ ವರ್ಷಗಳಷ್ಟು ಹಿಂದೆ. ಹೀಗೆ ಭೂಮಿಯ ಅಥವಾ ಬ್ರಹ್ಮಾಂಡದ ಇತಿಹಾಸದ ಕಾಲಾವಧಿಗೆ ಮಾನವನ ಇತಿಹಾಸದ ಕಾಲವಧಿಯನ್ನು ಹೋಲಿಸಿದರೆ ಕ್ಷಣಿಕವೆಂದೇ ಹೇಳಬಹುದು. ಇದನ್ನು ವಿವರಿಸಲು ಖ್ಯಾತ ವಿಜ್ಞಾನಿ ಕಾರ್ಲ್ ಸೇಗನ್ ತಮ್ಮ ಪುಸ್ತಕ ದಿ ಡ್ರ್ಯಾಗನ್ಸ್ ಆಫ್ ಎಡೆನ್ಸ್ ನಲ್ಲಿ ಬ್ರಹ್ಮಾಂಡದ ಉಗಮದಿಂದ ಹಿಡಿದು ಇಲ್ಲಿಯವರೆಗಿನ 15 ಬಿಲಿಯನ್ ವರ್ಷಗಳ ಕಾಲಾವಧಿಯನ್ನು ಒಂದು ವರ್ಷಕ್ಕೆ ಸಂಕುಚಿತಗೊಳಿಸಿ ಬ್ರಹ್ಮಾಂಡದ ಇತಿಹಾಸವನ್ನು ವಿವರಿಸಲೆತ್ನಿಸುತ್ತಾರೆ, ಅವರು ಇದನ್ನು ಕಾಸ್ಮಿಕ್ ಕ್ಯಾಲೆಂಡರ್ ಎಂದು ಕರೆದರು. ಈ ಕಾಲಾವಧಿಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ಈ ರೀತಿ ವಿವರಿಸಿದ್ದಾರೆ-



ಜನವರಿ 1 ~ ಬಿಗ್ ಬ್ಯಾಂಗ್, ಬ್ರಹ್ಮಾಂಡದ ಉಗಮ.ಮೇ 1 ~ ಮಿಲ್ಕಿ ವೇ ಗೆಲಾಕ್ಸಿಯ ಉಗಮ, ಸೆಪ್ಟೆಂಬರ್ 9 ~ ಸೌರವ್ಯೂಹದ ಉಗಮ, ಸೆಪ್ಟೆಂಬರ್ 14~ ಭೂಮಿಯ ರಚನೆ, ಸೆಪ್ಟೆಂಬರ್ 25~ ಭೂಮಿಯ ಮೇಲೆ ಮೊದಲ ಜೀವಿಗಳ ಉಗಮ, ಅಕ್ಟೋಬರ್ 2~ ನಮಗೆ ದೊರೆತಿರುವ ಅತ್ಯಂತ ಹಳೆಯ ಶಿಲೆಗಳು ರಚಿತಗೊಂಡಿದ್ದು, ಅಕ್ಟೋಬರ್ 9 ~ ನಮಗೆ ದೊರೆತಿರುವ ಅತ್ಯಂತ ಹಳೆಯ ಬ್ಯಾಕ್ಟೀರಿಯಾ ಮತ್ತು ಆಲ್ಗೇಗಳ ಪಳೆಯುಳಿಕೆಗಳು. ನವೆಂಬರ್ 1 ~ ನಿರ್ದಿಷ್ಟ ಲಿಂಗವಿರುವ ಸೂಕ್ಷ್ಮ ಜೀವಿಗಳ ಉಗಮ, ನವೆಂಬರ್ 12~ ನಮಗೆ ದೊರೆತಿರುವ ಅತ್ಯಂತ ಹಳೆಯ ದ್ಯುತಿ ಸಂಶ್ಲೇಷಣೆ (ಫೋಟೋಸಿಂಥೆಸಿಸ್) ನಡೆಸುತ್ತಿದ್ದ ಸಸ್ಯಗಳ ಪಳೆಯುಳಿಕೆಗಳು,  ನವೆಂಬರ್ 15 ~ ನ್ಯೂಕ್ಲಿಯಸ್ ಹೊಂದಿರತಕ್ಕಂತಹ ಜೀವಕೋಶಗಳ ಉಗಮ.

ಡಿಸೆಂಬರ್ 31 ~

ಮಧ್ಯಾಹ್ನ 1:30 ಕ್ಕೆ~ ಮಾನವನ ಪೂರ್ವಜರೆನ್ನಲಾದ ಪ್ರೊಕನ್ಸಲ್ ಮತ್ತು ರಾಮಾ ಪಿಥಿಕಸ್ ವಾನರರ ಜನನ. ರಾತ್ರಿ 10:30ಕ್ಕೆ ~ ಮೊಟ್ಟ ಮೊದಲ ಮಾನವನ ಉಗಮ. ರಾತ್ರಿ 11:00 ಕ್ಕೆ ~ ಮಾನವ ಶಿಲೆಗಳನ್ನು ಆಯುಧಗಳ ರೀತಿಯಲ್ಲಿ ಬಳಸುವುದನ್ನು ಕಲಿತದ್ದು. ರಾತ್ರಿ 11:46 ~ ಚೀನಾದ ಮಾನವ ಬೆಂಕಿಯನ್ನು ಬಳಸಲು ಕಲಿತದ್ದು. ರಾತ್ರಿ 11:56 ~ ಕೊನೆಯ ಹಿಮಯುಗದ ಆರಂಭ. ರಾತ್ರಿ 11:58 ~ಸಮುದ್ರ ಮಾರ್ಗದ ಮೂಲಕ ಮಾನವ ಮೊಟ್ಟ ಮೊದಲ ಬಾರಿಗೆ ಆಸ್ಟ್ರೇಲಿಯಾ ದ್ವೀಪವನ್ನು ತಲುಪಿದ್ದು. ರಾತ್ರಿ 11:59:20 ~ಕೃಷಿ ಮಾಡುವುದನ್ನು ಆರಂಭಿಸಿದ್ದು. ರಾತ್ರಿ 11:59:35~ ಮೊಟ್ಟ ಮೊದಲ ಪಟ್ಟಣಗಳು ತಲೆಯೆತ್ತಿದವು.ರಾತ್ರಿ 11:59:51 ~ಅಕ್ಕಾಡಿಯನ್ ಸಾಮ್ರಾಜ್ಯದಲ್ಲಿ ಅಕ್ಷರಗಳನ್ನು ಬಳಸಲು ಪ್ರಾಂಭವಾಯಿತು. ರಾತ್ರಿ 11:59:53 ~ ಕಂಚಿನ ಬಳಕೆ ಮತ್ತು ದಿಕ್ಸೂಚಿಗಳ ಬಳಕೆ ಆರಂಭಗೊಂಡದ್ದು. ರಾತ್ರಿ 11:59:54 ~ ಕಬ್ಬಿಣ ಬಳಸಲು ಕಲಿತದ್ದು. ರಾತ್ರಿ 11:59:55 ~ ಬುದ್ಧನ ಜನನ. ರಾತ್ರಿ 11:59:56 ~ಕ್ರಿಸ್ತನ ಜನನ. ರಾತ್ರಿ 11:59:59 ರಿಂದ 12:00:00 ಗಂಟೆ ವರೆಗೂ ವಿಜ್ಞಾನ ಹಾಗೂ ತಂತ್ರಜ್ಞಾನಗಳ ಅದ್ಭುತ ಯಶಸ್ಸು ಗಳಿಸಿದ ಕಾಲವೆನ್ನಬಹುದು.



ಇಲ್ಲಿ ಕೆಲ ಘಟನೆಗಳ ಕಾಲಮಾನದಲ್ಲಿ ಸ್ಥಾನ ಬದಲಾವಣೆ ಯಾಗಬಹುದು. ಉದಾಹರಣೆಗೆ ಅತ್ಯಂತ ಪ್ರಾಚೀನ ಮಾನವನ ಉಗಮ ರಾತ್ರಿ 10:30 ರ ಬದಲಿಗೆ 10:20 ಆಗಬಹುದು, ಒಂದು ವೇಳೆ ಹಾಗಾದರೂ ವಿಶ್ವದ ಇತಿಹಾಸದ ಕಾಲಾವಧಿಗೆ ಹೋಲಿಸಿದರೆ ಈ ವ್ಯತ್ಯಾಸವನ್ನು ನಗಣ್ಯವೆನ್ನಬಹುದು. ನಾವು ಇಲ್ಲೊಂದು ವಿಶೇಷವನ್ನು ಗಮನಿಸಬೇಕು –ಭೂಮಿಯ ರಚನೆ ಸೆಪ್ಟೆಂಬರ್  14 ರಂದಾಯಿತು ಎಂದು ಕೊಳ್ಳುವುದಾದರೆ ಮಾನವ ಡಿಸೆಂಬರ್ 31 ರಾತ್ರಿ 10 ಗಂಟೆಯವರೆಗೂ ಈ ಭೂಮಿಯ ಮೇಲೆ ಕಾಲಿಟ್ಟಿರಲೇ ಇಲ್ಲ! ನಾವು ಇತಿಹಾಸದ ಪುಸ್ತಕಗಳಲ್ಲಿ ಓದಿರುವುದು ಈ ಕಾಸ್ಮಿಕ್ ಕ್ಯಾಲೆಂಡರಿನ ಕೊನೆಯ 5 – 6 ಸೆಂಕೆಡುಗಳನ್ನಷ್ಟೆ! ನಮ್ಮ ಆಯುಷ್ಯವಾದರೂ ಎಷ್ಟು ? ಹೆಚ್ಚೆಂದರೆ 100 ವರ್ಷ ಅಂದರೆ ಕಾಸ್ಮಿಕ್ ಕ್ಯಾಲೆಂಡರಿನ ಸುಮಾರು 0.2 ಸೆಕೆಂಡ್ ಗಳು ! ಜೀವವಿಕಾಸವು ಅತ್ಯಂತ ನಿಧಾನ ಗತಿಯಲ್ಲಿ ಸಾಗುತ್ತದೆ.ಅಂದರೆ ಒಂದು ಹೊಸ ಜೀವಿಯು ಈ ಭೂಮಿಯ ಮೇಲೆ ಕಾಲಿಡಬೇಕೆಂದರೆ ಹಲವು ಲಕ್ಷ ವರ್ಷಗಳು ಹಿಡಿಯುತ್ತದೆ. ಉದಾಹರಣೆಗೆ: ನಮ್ಮ ಕಾಲಿನ ಹೆಬ್ಬೆರಳು ಆಕಾರ, ಗಾತ್ರ ಹಾಗೂ ಅವು ನಿರ್ವಹಿಸುವ ಪಾತ್ರಗಳಲ್ಲಿ ಕಪಿಗಳ ಹೆಬ್ಬೆರಳಿಗಿಂತ ಭಿನ್ನ. ವಿಕಾಸದ ಹಾದಿಯಲ್ಲಿ ಇಂತಹ ಒಂದು ಚಿಕ್ಕ ಬದಲಾವಣೆಗೂ ಮಿಲಿಯಗಟ್ಟಲೆ ವರ್ಷಗಳಷ್ಟು ಸಮಯ ಹಿಡಿದಿದೆಯೆಂದರೆ ಇದೆಷ್ಟು ನಿಧಾನ ಪ್ರಕ್ರಿಯೆಯೆಂಬುದು ತಿಳಿಯುತ್ತದೆ. ಇಷ್ಟು ಅಲ್ಪಾಯುಷಿಗಳಾದ ನಮಗೆ ನಮ್ಮ ಜೀವಿತಾವಧಿಯಲ್ಲಿ ಜೀವವಿಕಾಸವನ್ನು ಕಣ್ಣಾರೆ ವೀಕ್ಷಿಸುವುದಾದರೂ ಹೇಗೆ?

ನಾವು ಇನ್ನೊಂದು ವಿಷಯವನ್ನು ಗಮನಿಸಬೇಕು-ನಮ್ಮ ಭೂಮಿಯ ಮೇಲೆ ಮೊಟ್ಟ ಮೊದಲ ಜೀವಿಯಿಂದ ಹಿಡಿದು ಮಾನವನವರೆಗೂ ಜೀವಿಸಿದ ಸಮಸ್ತ ಜೀವಸಂಕುಲಗಳಲ್ಲಿ ಈಗ ಉಳಿದಿರುವವು ಶೇಕಡ ಹತ್ತಕ್ಕಿಂತಲೂ ಕಡಿಮೆ! ಅಂದರೆ ವಿಕಾಸಗೊಂಡ ಶೇಕಡ ತೊಂಬತ್ತಕ್ಕಿಂತಲೂ ಅಧಿಕ ಜೀವಸಂಕುಲಗಳು, ನಿರಂತರ ಬದಲಾವಣೆಗೊಳಗಾಗುವ ಪ್ರಕೃತಿಗೆ ಹೊಂದಿಕೊಳ್ಳಲಾಗದೆ, ಅಳಿದು ಹೋಗಿವೆ. ಪ್ರಕೃತಿಯೆಂಬ ಈ ಸ್ವಯಂಚಾಲಿತ  ಮಹಾಪ್ರಯೋಗಾಲಯದಲ್ಲಿ ನಿರಂತರ Trial and Error ಪ್ರಯೋಗಗಳು ನಡೆಯುತ್ತಿರುತ್ತವೆ. ಈ ಪ್ರಯೋಗಗಳಿಗೆ ಯಾವುದೇ ಉದ್ದೇಶವಿಲ್ಲ. ಇಲ್ಲಿ ಉತ್ಪತ್ತಿಯಾಗುವ ಹೊಸ ಜೀವಸಂಕುಲಗಳಲ್ಲಿ ಬಹುತೇಕವು ದುರ್ಬಲವಾದವುಗಳು ಹಾಗೂ ನಿರ್ನಾಮವಾಗುವಂತಹವು. ಅಂದರೆ ಇಲ್ಲಿ ಗೆಲುವಿಗಿಂತ ಸೋಲೇ ಹೆಚ್ಚು, ಬದುಕಿಗಿಂತ ಸಾವೇ ಹೆಚ್ಚು!


ಒಂದು ವೇಳೆ ಭಗವಂತನು ಸೃಷ್ಟಿಕರ್ತನಾಗಿದ್ದರೆ, ಸರ್ವಶಕ್ತನಾಗಿದ್ದರೆ ಅವನೇಕೆ ಮಾನವನನ್ನು ಸೃಷ್ಟಿಸಲು ಬಿಲಿಯಗಟ್ಟಲೆ ವರ್ಷಗಳಷ್ಟು ಸಮಯವನ್ನು ತೆಗೆದುಕೊಂಡ? ನಿಸರ್ಗಕ್ಕೆ ಅದ್ಭುತವಾಗಿ ಹೊಂದಿಕೊಂಡಿರುವ ಇಂದಿನ ಹಲವು ಜೀವಿಗಳನ್ನು ಸೃಷ್ಟಿಸುವ ಮುನ್ನ ಅವನೇಕೆ ಇಷ್ಟು ಬಾರಿ (ಶೇಕಡ ತೊಂಬತ್ತು ಬಾರಿ) ಸೋಲುಂಡ? ಅಂದರೆ ಭಗವಂತನಿಗೂ ಮಾನವನಿಗಿರುವಂತೆ ಕಾಲದ ಮಿತಿಯಿದೆಯೇ? ಮನುಷ್ಯನು ತನ್ನ ಪ್ರಯೋಗಗಳಲ್ಲಿ ಎಡವುವಂತೆ ಅವನೂ ಎಡವುವುದಾದರೆ ಅವನನ್ನು ಸರ್ವಶಕ್ತನೆಂದು ಒಪ್ಪುವುದಾದರೂ ಹೇಗೆ?

ಕೆಲವೇ ಶತಮಾನಗಳಲ್ಲಿ ಮಾನವ ಜ್ಞಾನ- ತಂತ್ರಜ್ಞಾನ ವಿಷಯದಲ್ಲಿ ಅದ್ಭುತವೆನ್ನುವಂತಹ ಯಶಸ್ಸುಗಳಿಸಿರಬೇಕಾದರೆ ಬಿಲಿಯಗಟ್ಟಲೆ ವರ್ಷಗಳಿಂದ ನಡೆದುಕೊಂಡು ಬಂದಿರುವ ಜೀವವಿಕಾಸ ಅದಿನ್ನೆಷ್ಟು ಅದ್ಭುತಗಳನ್ನು ಸಾಧಿಸಿರಬೇಕು? 

Thursday, February 24, 2011

ಗುರು ಬ್ರಹ್ಮ, ಗುರು ವಿಷ್ಣು …ಅಂತೆಲ್ಲಾ ಕಿವಿ ಮೇಲೆ ಹೂ ಇಟ್ಟಿದ್ದು ಸಾಕು…


ನಾನು ಸುಮಾರು ಎರಡುವರೆ ವರ್ಷಗಳ ಕಾಲ ಹೈಸ್ಕೂಲ್ ಶಿಕ್ಷಕನಾಗಿ ಬಳ್ಳಾರಿಯ ಎರಡು ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ನನಗೆ ಶಿಕ್ಷಕನಾಗುವ ಯಾವ ಆಸೆಯೂ ಇರಲಿಲ್ಲ ಆದರೂ ಪರಿಸ್ಥಿತಿಗಳು ಅನಿವಾರ್ಯವಾಗಿ ನನ್ನನ್ನು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿದವು. ನಾನು ಬಿ.ಎಡ್. ಕೋರ್ಸ್ ಮಾಡಿಕೊಂಡವನಲ್ಲ. ಚೆನ್ನಾಗಿ ಪಾಠ ಮಾಡಲು ಅಥವಾ  ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಳ್ಳಲು ಅದರ ಅಗತ್ಯವೂ ಇಲ್ಲ. ಈ ಎರಡೂವರೆ ವರ್ಷಗಳಲ್ಲಿ ಶಿಕ್ಷಕರು ಅನುಭವಿಸುವ ಸಂಕಷ್ಟಗಳನ್ನು ಹತ್ತಿರದಿಂದ ನೋಡಿರುವುದಲ್ಲದೇ ಸ್ವತಃ ಅನುಭವಿಸಿದ್ದೇನೆ ಕೂಡ.

2004 ರಲ್ಲಿ  ಖಾಸಗಿ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ನನ್ನ ಸಂಬಳ ಕೇವಲ ಮೂರು ಸಾವಿರ ರೂಪಾಯಿ. ಆ ಶಾಲೆಯ ಒಡೆಯ ಸಂದರ್ಶನದ ಸಮಯದಲ್ಲಿ ಹೇಳಿದ ಮಾತು ಇನ್ನೂ ನನ್ನ ನೆನಪಿನಲ್ಲಿ ಅಚ್ಚಳಿಯದೆ  ಉಳಿದಿದೆ  -          “….we used to pay Rs.2500 to previous teacher, since you are good we will pay you Rs. 3000, but I request you to not reveal your salary to any of your colleagues .…”  ಅವರ ಈ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ತಿಂಗಳಿಗೆ ಮೂರು ಸಾವಿರ ಸಂಬಳವಂತೆ! ಅದೇನೋ ಮಹಾ ದೊಡ್ಡ ಸಂಬಳವೆಂಬಂತೆ ನಾನು ಅದನ್ನು ಗೌಪ್ಯವಾಗಿಡಬೇಕಂತೆ!! ಆದರೂ ನಾನು ಆ ಕೆಲಸವನ್ನೊಪ್ಪಿಕೊಂಡೆ, ನನ್ನ ಸಂಬಳವನ್ನು ಕೇವಲ ನನ್ನ ಸಹೋದ್ಯೋಗಗಳೊಂದಿಗಷ್ಟೇ ಅಲ್ಲ ಬೇರೆಯವರೊಂದಿಗೂ ಹೇಳಿಕೊಳ್ಳಲಿಲ್ಲ. ಅಷ್ಟು ಕಡಿಮೆ ಸಂಬಳ ಪಡೆಯುತ್ತಿದ್ದೇನೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿತ್ತು. ಸುಮಾರು ಒಂದೂವರೆ ವರ್ಷಗಳ ನಂತರ  ಇನ್ನೊಂದು ಶಾಲೆಗೆ ಸೇರಿದೆ. ಅಲ್ಲಿ ನನ್ನ ಸಂಬಳ ನಾಲ್ಕು ಸಾವಿರ ರೂಪಾಯಿ. ಈ ಶಾಲೆಯ ಸುಮಾರು ನಲವತ್ತು ಶಿಕ್ಷಕರ ಪೈಕಿ ನನ್ನ ಸಂಬಳವೇ ಅತಿ ಹೆಚ್ಚು! ಹಾಗೂ ಈ ವಿಷಯಕ್ಕಾಗಿ ಇತರ ಶಿಕ್ಷಕರು ನನ್ನ ಬಗ್ಗೆ ಅಸೂಯೆ ಪಟ್ಟುಕೊಂಡದ್ದಿದೆಯೆಂದರೆ ಅವರ ಸಂಬಳವೆಷ್ಟಿರಬೇಕು ಎಂಬುದನ್ನು ಊಹಿಸಿಕೊಳ್ಳಿ. ಇಂದು ಖಾಸಗಿ ಶಾಲೆಯ ಶಿಕ್ಷಕರು ಮನೆ ನಡೆಸಬೇಕಂದರೆ ಅನಿವಾರ್ಯವಾಗಿ ಪರ್ಯಾಯ ಆದಾಯದ ವ್ಯವಸ್ಥೆಯನ್ನು ಮಾಡಿಕೊಳ್ಳಲೇಬೇಕು. ಗಣಿತ ಹಾಗೂ ವಿಜ್ಞಾನ ಶಿಕ್ಷಕರು ಮನೆಪಾಠಗಳಿಗೆ ಮೊರೆ ಹೋದರೆ ಇತರ ವಿಷಯಗಳ ಶಿಕ್ಷಕರು ಬೇರಿನ್ನೇನೋ ವ್ಯವಹಾರವನ್ನು ನಡೆಸಲೇಬೇಕು.

 ನಾನು ಕೆಲಸ ಮಾಡಿದ ಈ ಶಾಲೆಗಳು ಸಣ್ಣವೇನಲ್ಲ ನನ್ನ ಜಿಲ್ಲೆಯಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ವರ್ಷಗಳಷ್ಟು ಹಳೆಯ ಶಾಲೆಗಳಿವು. ಸಾಕಷ್ಟು ಹೆಸರು ಗಳಿಸಿವೆ. ಮೊದಲ ಶಾಲೆಯಂತೂ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ. ಶಾಲೆಯ ಶುಲ್ಕ ಸುಮಾರು ಹತ್ತು ಸಾವಿರ ರೂಪಾಯಿ. ನರ್ಸರಿ ತರಗತಿಗಳಿಗೆ ಅವರು  ತೆಗೆದುಕೊಳ್ಳುವ ಡೊನೇಶನ್ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿಗಳು. ಶಾಲೆಯ ಒಟ್ಟು  ವಾರ್ಷಿಕ ಆದಾಯ ನಾಲ್ಕು ಕೋಟಿಯನ್ನು ಮೀರುತ್ತದೆ. ಶಿಕ್ಷಕರ ಸಂಬಳ, ಸರ್ಕಾರಿ ಅಧಿಕಾರಿಗಳ ಗಿಂಬಳ, ಹಾಗೂ ಇತರೆ ಖರ್ಚುಗಳು ಒಂದೂವರೆ ಕೋಟಿಯನ್ನು ಮೀರುವುದಿಲ್ಲ. ಅಂದರೆ ವರ್ಷವೊಂದರಲ್ಲಿ ಸುಮಾರು ಎರಡುವರೆ ಕೋಟಿಯಷ್ಟು ನಿವ್ವಳ ಲಾಭ! ಇಂತಹ ಒಳ್ಳೇ ಲಾಭದಲ್ಲಿ ನಡೆಯುತ್ತಿರುವ ಶಾಲೆಗಳ ಶಿಕ್ಷಕರ ಪರಿಸ್ಥಿತಿ ಹೀಗಿದ್ದರೆ ಇದಕ್ಕಿಂತ ಕಡಿಮೆ ಲಾಭ ಮಾಡುವ ಇತರ ಶಾಲೆಗಳ ಶಿಕ್ಷಕರ ಪರಿಸ್ಥಿತಿ ಇನ್ನೂ ಹೇಗಿರಬಹುದೆಂದು ಊಹಿಸಿಕೊಳ್ಳಿ. ಲಕ್ಷಾಂತರ ಸಂಖ್ಯೆಯಲ್ಲಿ ದುಡಿಯುತ್ತಿರುವ ಖಾಸಗಿ ಶಾಲೆಯ ಶಿಕ್ಷಕರಿಗೆ ಈ ಶೋಷಣೆಯಿಂದ ಮುಕ್ತಿ ಪಡೆಯಬೇಕೆಂದರೆ ಇರುವ ಮಾರ್ಗವೊಂದೇ- ಪ್ರವೇಶ ಪರೀಕ್ಷೆ ಬರೆದು ಸರಕಾರಿ ಶಾಲೆಯನ್ನು ಸೇರಿಕೊಳ್ಳುವುದು. ಸರಕಾರವಾದರೂ ಎಷ್ಟು ಜನರಿಗೆ ಕೆಲಸ ಕೊಟ್ಟೀತು?

ಇನ್ನು ಸರಕಾರಿ ಶಾಲೆಯ ಶಿಕ್ಷಕರ ಪರಿಸ್ಥಿತಿ ಆದಾಯದ ದೃಷ್ಟಿಯಿಂದ ಖಾಸಗಿ ಶಿಕ್ಷಕರಿಗಿಂತ  ತುಸು ಉತ್ತಮವಾದರೂ ಇತರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ವಿದ್ಯಾವಂತರಿಗೆ ಹೋಲಿಸಿದರೆ ತೀರಾ ಕಡಿಮೆಯೆಂದೇ ಹೇಳಬಹುದು. ಸರಕಾರ ಪ್ರತೀ ಬಾರಿ ವೇತನದ ಪುನರ್ ಪರೀಶೀಲನೆ ಸಂದರ್ಭದಲ್ಲೂ ಶಿಕ್ಷಕರು ಬೀದಿಗಿಳಿದು ಹೆಚ್ಚಿನ ವೇತನಕ್ಕಾಗಿ ಹೋರಾಟ ನಡೆಸಬೇಕಾದಂತಹ ಪರಿಸ್ಥಿತಿಯಿದೆ. ನನ್ನ ತಾಯಿ 33 ವರ್ಷ ಸತತವಾಗಿ ಸರಕಾರಿ ಶಾಲೆಯಲ್ಲಿ ದುಡಿದ ನಂತರ (ಇನ್ನೇನು ನಾಲ್ಕು ತಿಂಗಳಲ್ಲಿ ನಿವೃತ್ತಿ ಹೊಂದುತ್ತಾರೆ) ಬರುವ ವೇತನ ಇಪ್ಪತ್ತೈದು ಸಾವಿರವಷ್ಟೆ. ಆದರೆ ಈಗಷ್ಟೇ ಓದು ಮುಗಿಸಿ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರ  ಹುಡುಗ/ಹುಡುಗಿಯರ ವೇತನ 20 ರಿಂದ 60 ಸಾವಿರ ರೂಪಾಯಿಗಳು! ಶಿಕ್ಷಣ ವಲಯವು ಅನುತ್ಪಾದಕ ವಲಯವೆಂಬ  ಧೋರಣೆಯೇ ಈ ಅಸಮಾನತೆಗೆ ಮೂಲ ಕಾರಣ. ನಮ್ಮ ಪ್ರಧಾನಮಂತ್ರಿಗಳು, ವಿತ್ತ ಮಂತ್ರಿಗಳು, ಮುಖ್ಯಮಂತ್ರಿಗಳು ನಮ್ಮ ದೇಶ ಹಾಗೂ ರಾಜ್ಯಗಳು ಸಾಧಿಸಿರುವ ಆರ್ಥಿಕ ಪ್ರಗತಿಯನ್ನು ಯಾವ ಶ್ರೀಸಾಮಾನ್ಯನಿಗೂ ಅರ್ಥವಾಗದ ಅಂಕಿ ಅಂಶಗಳ ಮೂಲಕ ಪ್ರಸ್ತುತ ಪಡಿಸುತ್ತಾರೆ. ದೇಶವು ಆರ್ಥಿಕವಾಗಿ ಇನ್ನೂ ಸಬಲವಾಗಬೇಕೆಂದರೆ ನಮ್ಮ ನಾಗರಿಕರು ಸುಶಿಕ್ಷಿತರಾಗುವುದು ಅನಿವಾರ್ಯ ಎಂದೆಲ್ಲಾ ಭಾಷಣ ಬಿಗಿಯುತ್ತಾರೆ. ಆದರೆ ಬಜೆಟ್ ಮಂಡಿಸುವಾಗ ಇಂತಹ ಸುಶಿಕ್ಷಿತ ವರ್ಗವನ್ನು ಸೃಷ್ಟಿಸುವ ಶಿಕ್ಷಕರನ್ನೇ ಮರೆತು ಬಿಡುತ್ತಾರೆ. ಒಬ್ಬ ಶಾಲಾ ಶಿಕ್ಷಕ ಇತರ ವೃತ್ತಿಪರರಂತೆ ಕಾರಿನಲ್ಲಿ ಕೆಲಸಕ್ಕೆ ಹೋಗುವುದನ್ನು ಊಹಿಸಿಕೊಳ್ಳುವುದು ಅಸಾಧ್ಯವಷ್ಟೇ ಅಲ್ಲ ಅಪರಾಧ ಕೂಡ. ಯಾಕೆಂದರೆ ದೇಶ ಸೇವೆ, ನಿಸ್ವಾರ್ಥ ಸೇವೆ ಎಂಬ ಮೌಲ್ಯಗಳೆಲ್ಲಾ ಶಿಕ್ಷಕರಿಗಷ್ಟೇ ಮೀಸಲಿಟ್ಟಿವೆಯಲ್ಲವೇ. ಆರ್ಥಿಕ ಶೋಷಣೆಯ ಜೊತೆಗೆ ಶಾಲಾ ಆಡಳಿತದವರಿಂದ ಮಾನಸಿಕ ಹಿಂಸೆ, ವಿದ್ಯಾರ್ಥಿಗಳ ಉದ್ಧಟತನ ಹಾಗೂ ಪೋಷಕರ ದರ್ಪವನ್ನು ಬೋನಸ್ಸೆಂಬಂತೆ ಪಡೆಯಬೇಕು.

ದಿನೇ ದಿನೇ ಶಿಕ್ಷಣದ ಗುಣ ಮಟ್ಟ ಕುಸಿಯುತ್ತಿದೆ ಎಂದು ಜನ ಆಡಿಕೊಳ್ಳುವುದುಂಟು. ಇದರಲ್ಲಿ ಸತ್ಯವಿಲ್ಲದಿಲ್ಲ. ಇದನ್ನು ನಿವಾರಿಸಲು ಶಿಕ್ಷಣ ತಜ್ಞರು ಶಿಶು-ಕೇಂದ್ರಿತ ಬೋಧನಾ ವಿಧಾನಗಳ ಬಗ್ಗೆ , ಶಿಕ್ಷಣದಲ್ಲಿ ಮನೋವಿಜ್ಞಾದ ಪಾತ್ರ ಎಂಬ ವಿಷಯಗಳ ಬಗ್ಗೆ ತಾಸುಗಟ್ಟಲೆ ಕೊರೆದು, ಪುಟಗಟ್ಟಲೆ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಿಟ್ಟಿಸಿ ಬೀಗುತ್ತಾರೆ. ಈ ವಿಚಾರಗಳೆಲ್ಲ ಒಳ್ಳೆಯದೇ ಪ್ರಭುಗಳೇ, ಇವನ್ನು ಖಂಡಿತವಾಗಿ ಅನುಸರಿಸೋಣ. ಆದರೆ ಇಂತಹ ಉದಾತ್ತ ಬೋಧನಾ ವಿಧಾನಗಳನ್ನು, ತಿಂಗಳ ಕೊನೆಯಲ್ಲಿ ದಿನಸಿಗೆ ಹಣ ಹೇಗೆ ಹೊಂದಿಸಬೇಕೆಂಬ ಎಂಬ ಚಿಂತೆಯಲ್ಲಿ ಮುಳುಗಿದ ಶಿಕ್ಷಕನು ಅನುಷ್ಠಾನಗೊಳಿಸಲು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಸಿದ್ಧನಾಗಿದ್ದಾನೆಯೆ  ಎಂದು ನೀವ್ಯಾಕೆ ಯೋಚಿಸುವುದಿಲ್ಲ? ಶಿಕ್ಷಣದ ಗುಣಮಟ್ಟ ಕುಸಿಯಲು ಹಲವಾರು ಕಾರಣಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಒಳ್ಳೆಯ ಶಿಕ್ಷಕರು ದೊರೆಯುತ್ತಿಲ್ಲವೆನ್ನುವುದು, ಯುವ ವರ್ಗಕ್ಕೆ ಶಿಕ್ಷಣ ವೃತ್ತಿಯು ಇಂದು ಆಕರ್ಷಕ ವೃತ್ತಿಯಾಗಿ ಉಳಿದಿಲ್ಲವೆನ್ನುವುದು, ಬಿ.ಎಡ್, ಟಿಸಿಎಚ್ ಕೋರ್ಸುಗಳ ಗುಣಮಟ್ಟ ಕುಸಿದಿರುವುದು. ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನ, ಲಂಚಕೋರತನ ಇತ್ಯಾದಿ ಇದಕ್ಕೆ ಕಾರಣವೆನ್ನಬಹುದು. ಇಂದು ಬುಧ್ಧಿವಂತ ಯುವಕ/ಯುವತಿಯರಾರೂ ಶಿಕ್ಷಣ ಕ್ಷೇತ್ರಕ್ಕೆ ಬರಲು ಇಷ್ಟ ಪಡುವುದಿಲ್ಲ. ಶಿಕ್ಷಕರಾಗಲು ಯಾರು ಬಯಸುತ್ತೀರಿ ಎಂದು ನಾನು ತರಗತಿಯೊಂದರ ಮಕ್ಕಳಿಗೆ ಪ್ರಶ್ನೆ ಕೇಳಿದಾಗ ಅಲ್ಲಿ ಕುಳಿತಿದ್ದ ಅರವತ್ತು ಮಕ್ಕಳಲ್ಲಿ  ಒಂದೋ ಎರಡೋ ಮಕ್ಕಳ ಕೈಗಳಷ್ಟೇ ಮೇಲೆದ್ದವು. ದಿನನಿತ್ಯ ಶಿಕ್ಷಕರ ಬವಣೆಯನ್ನು ಕಣ್ಣಾರೆ ನೋಡುವ ಅವರಿಗೆ ಶಿಕ್ಷಕರಾಗಲು ಪ್ರೇರಣೆಯಾದರೂ ಎಲ್ಲಿಂದ ಬರಬೇಕು ?  ಉತ್ತಮ ವೇತನ ದೊರೆತಲ್ಲಿ, ಶಿಕ್ಷಕರಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ವೃತ್ತಿಪರತೆ ಹೆಚ್ಚಿದಲ್ಲಿ, ಒಳ್ಳೆಯ ಶಿಕ್ಷಕರು ದೊರೆಯುವರೆಂಬುದರಲ್ಲಿ ಅನುಮಾನವೇ ಇಲ್ಲ. ಈ ಬಗ್ಗೆ ಚಿಂತಿಸುವವರಾದರೂ ಯಾರು?

ಶಿಕ್ಷಕನೊಬ್ಬ ಮಕ್ಕಳಿಗೆ ದಂಡಿಸಿದಾಗ ಅಥವಾ ನಿಂದಿಸಿದಾಗ ಆ ಸುದ್ದಿಯು ದೊಡ್ಡಮಟ್ಟದಲ್ಲಿ ಮಾಧ್ಯಮಗಳಲ್ಲಿ ವಿಜೃಂಭಿಸುತ್ತದೆ. ಇಂತಹ ಕೃತ್ಯಗಳನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಸ್ವಾತಂತ್ರ್ಯ ಬಂದು ಅರವತ್ನಾಲ್ಕು ವರ್ಷ ಕಳೆದರೂ ನಮ್ಮ ದೇಶದ ಮೂರನೇ ದರ್ಜೆಯ (ಅಥವಾ ಅದಕ್ಕಿಂತಲೂ ಹೀನ?!) ನೌಕರರಂತೆ ಜೀವಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರ  ಬವಣೆಯ ಬಗ್ಗೆ ಯಾವ ಮಾಧ್ಯಮದವರಾದರೂ ಸೊಲ್ಲೆತ್ತಿದ್ದಾರೆಯೇ ? ತಮ್ಮ ಮಕ್ಕಳಿಗೆ ಒಂದು ಮಾರ್ಕು ಕಡಿಮೆ ಬಂದರೂ ಶಿಕಕ್ಷರನ್ನು ದೂಷಿಸುವ ಪೋಷಕರು ಅವರ ಮಕ್ಕಳ ಭವಿಷ್ಯದ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಕರ ಸಂಕಷ್ಟಗಳ ಬಗ್ಗೆ ಒಂದು ಕ್ಷಣವಾದರೂ ಯೋಚಿಸುತ್ತಾರೆಯೇ? ವರುಷಕ್ಕೆ ಕೋಟಿಗಟ್ಟಲೆ ಎಣಿಸುವ ಶಾಲಾ ಆಡಳಿತದವರು ತಮಗೆ ಇಷ್ಟು ಲಾಭ ತಂದು ಕೊಟ್ಟ ಶಿಕ್ಷಕರು ಮೂರ್ನಾಲ್ಕು ಸಾವಿರಗಳಲ್ಲಿ ಹೇಗಾದರೂ ಜೀವನ ನಡೆಸುತ್ತಿರಬಹುದೆಂದು ಯೋಚಿಸುತ್ತಾರೆಯೆ ? ದಾರಿಯಲ್ಲಿ ತನ್ನ ಹಳೆಯ ಗುರುವು ಕಂಡಾಗ ಹೇಗಿದ್ದೀರ ಎಂದು ಸಹ ಮಾತನಾಡಿಸದೆ ಮುಖ ತಿರುಗಿಸಿಕೊಂಡು ಹೋಗುವ ಯುವಕರು ತನಗೆ ತನ್ನ ಸಂಬಳ ಎಣಿಸಲು ಸಾಧ್ಯವಾಗಿರುವುದು ಇವರು ನನಗೆ ಲೆಖ್ಖ ಹೇಳಿಕೊಟ್ಟಿದ್ದರಿಂದಲೇ ಅಲ್ಲವೆ ಎಂದು  ಯೋಚಿಸುತ್ತಾರೆಯೇ?

 ಓ ಕೃತಘ್ನ ಸಮಾಜವೇ… ಶಿಕ್ಷಕರ ದಿನಾಚರಣೆಯಂದು “ಶಿಕ್ಷಕ ವೃತ್ತಿ ಮಹಾನ್ ವೃತ್ತಿ…” ಅಂತೆಲ್ಲಾ ತೌಡು ಕುಟ್ಟಿದ್ದು ಸಾಕು, ಇಂದು ನಿಮ್ಮ “ಹ್ಯಾಪೀ ಟೀಚರ್ಸ್ ಡೇ” ಎಂಬ ಅರ್ಥ ಕಳೆದುಕೊಂಡ ಶುಭಾಶಯ ನಮ್ಮಲ್ಲಿ ಯಾವುದೇ  ಭಾವನೆಗಳನ್ನು ಸ್ಫುರಿಸುವುದಿಲ್ಲ, “..ಗುರುಬ್ರಹ್ಮ, ಗುರು ವಿಷ್ಣು, ಗುರು ದೇವೋ… ಮಹೇಶ್ವರಃ…” ಅಂತೆಲ್ಲಾ ಹೇಳಿ ನಮ್ಮ ಕಿವಿಯ ಮೇಲೆ ಹೂ  ಇಡುವುದನ್ನು ಈಗಲಾದರೂ ನಿಲ್ಲಿಸಿ. ನೀವು ಇವೇನನ್ನು ಮಾಡದಿದ್ದರೂ ನಮ್ಮ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವಷ್ಟು ‘ವೃತ್ತಿ-ಅಭಿಮಾನ’ ನಮ್ಮಲ್ಲಿ ಇನ್ನೂ ಉಳಿಸಿಕೊಂಡಿದ್ದೇವೆ ಹಾಗೂ ಉಳಿಸಿಕೊಂಡಿರುತ್ತೇವೆ. ನಾವೇನೂ ಮಹಾನ್ ವ್ಯಕ್ತಿಗಳಲ್ಲ, ನಮಗೂ ಇತರರಂತೆ ಭೌತಿಕ ಅವಶ್ಯಕತೆಗಳಿರುತ್ತವೆ, ಆಸೆ-ಆಕಾಂಕ್ಷೆಗಳಿರುತ್ತವೆ. ಇವೆಲ್ಲಾ ನಿಮ್ಮ ಬಣ್ಣ-ಬಣ್ಣದ ಮಾತುಗಳಿಂದ ದೊರೆಯುವುದಿಲ್ಲ. ಇದಕ್ಕೆ ಒಳ್ಳೆಯ ಸಂಬಳ ಬೇಕು…. ಹಲೋ… ಕೇಳುತ್ತಿದೆಯಾ????