ನಾನು ಸುಮಾರು ಎರಡುವರೆ ವರ್ಷಗಳ ಕಾಲ ಹೈಸ್ಕೂಲ್ ಶಿಕ್ಷಕನಾಗಿ ಬಳ್ಳಾರಿಯ ಎರಡು ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ನನಗೆ ಶಿಕ್ಷಕನಾಗುವ ಯಾವ ಆಸೆಯೂ ಇರಲಿಲ್ಲ ಆದರೂ ಪರಿಸ್ಥಿತಿಗಳು ಅನಿವಾರ್ಯವಾಗಿ ನನ್ನನ್ನು ಶಿಕ್ಷಣ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವಂತೆ ಮಾಡಿದವು. ನಾನು ಬಿ.ಎಡ್. ಕೋರ್ಸ್ ಮಾಡಿಕೊಂಡವನಲ್ಲ. ಚೆನ್ನಾಗಿ ಪಾಠ ಮಾಡಲು ಅಥವಾ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿ ಸೇರಿಕೊಳ್ಳಲು ಅದರ ಅಗತ್ಯವೂ ಇಲ್ಲ. ಈ ಎರಡೂವರೆ ವರ್ಷಗಳಲ್ಲಿ ಶಿಕ್ಷಕರು ಅನುಭವಿಸುವ ಸಂಕಷ್ಟಗಳನ್ನು ಹತ್ತಿರದಿಂದ ನೋಡಿರುವುದಲ್ಲದೇ ಸ್ವತಃ ಅನುಭವಿಸಿದ್ದೇನೆ ಕೂಡ.
2004 ರಲ್ಲಿ ಖಾಸಗಿ ಶಾಲೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಾಗ ನನ್ನ ಸಂಬಳ ಕೇವಲ ಮೂರು ಸಾವಿರ ರೂಪಾಯಿ. ಆ ಶಾಲೆಯ ಒಡೆಯ ಸಂದರ್ಶನದ ಸಮಯದಲ್ಲಿ ಹೇಳಿದ ಮಾತು ಇನ್ನೂ ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ - “….we used to pay Rs.2500 to previous teacher, since you are good we will pay you Rs. 3000, but I request you to not reveal your salary to any of your colleagues .…” ಅವರ ಈ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ತಿಂಗಳಿಗೆ ಮೂರು ಸಾವಿರ ಸಂಬಳವಂತೆ! ಅದೇನೋ ಮಹಾ ದೊಡ್ಡ ಸಂಬಳವೆಂಬಂತೆ ನಾನು ಅದನ್ನು ಗೌಪ್ಯವಾಗಿಡಬೇಕಂತೆ!! ಆದರೂ ನಾನು ಆ ಕೆಲಸವನ್ನೊಪ್ಪಿಕೊಂಡೆ, ನನ್ನ ಸಂಬಳವನ್ನು ಕೇವಲ ನನ್ನ ಸಹೋದ್ಯೋಗಗಳೊಂದಿಗಷ್ಟೇ ಅಲ್ಲ ಬೇರೆಯವರೊಂದಿಗೂ ಹೇಳಿಕೊಳ್ಳಲಿಲ್ಲ. ಅಷ್ಟು ಕಡಿಮೆ ಸಂಬಳ ಪಡೆಯುತ್ತಿದ್ದೇನೆಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿತ್ತು. ಸುಮಾರು ಒಂದೂವರೆ ವರ್ಷಗಳ ನಂತರ ಇನ್ನೊಂದು ಶಾಲೆಗೆ ಸೇರಿದೆ. ಅಲ್ಲಿ ನನ್ನ ಸಂಬಳ ನಾಲ್ಕು ಸಾವಿರ ರೂಪಾಯಿ. ಈ ಶಾಲೆಯ ಸುಮಾರು ನಲವತ್ತು ಶಿಕ್ಷಕರ ಪೈಕಿ ನನ್ನ ಸಂಬಳವೇ ಅತಿ ಹೆಚ್ಚು! ಹಾಗೂ ಈ ವಿಷಯಕ್ಕಾಗಿ ಇತರ ಶಿಕ್ಷಕರು ನನ್ನ ಬಗ್ಗೆ ಅಸೂಯೆ ಪಟ್ಟುಕೊಂಡದ್ದಿದೆಯೆಂದರೆ ಅವರ ಸಂಬಳವೆಷ್ಟಿರಬೇಕು ಎಂಬುದನ್ನು ಊಹಿಸಿಕೊಳ್ಳಿ. ಇಂದು ಖಾಸಗಿ ಶಾಲೆಯ ಶಿಕ್ಷಕರು ಮನೆ ನಡೆಸಬೇಕಂದರೆ ಅನಿವಾರ್ಯವಾಗಿ ಪರ್ಯಾಯ ಆದಾಯದ ವ್ಯವಸ್ಥೆಯನ್ನು ಮಾಡಿಕೊಳ್ಳಲೇಬೇಕು. ಗಣಿತ ಹಾಗೂ ವಿಜ್ಞಾನ ಶಿಕ್ಷಕರು ಮನೆಪಾಠಗಳಿಗೆ ಮೊರೆ ಹೋದರೆ ಇತರ ವಿಷಯಗಳ ಶಿಕ್ಷಕರು ಬೇರಿನ್ನೇನೋ ವ್ಯವಹಾರವನ್ನು ನಡೆಸಲೇಬೇಕು.
ನಾನು ಕೆಲಸ ಮಾಡಿದ ಈ ಶಾಲೆಗಳು ಸಣ್ಣವೇನಲ್ಲ ನನ್ನ ಜಿಲ್ಲೆಯಲ್ಲಿ ಸುಮಾರು ಇಪ್ಪತ್ತರಿಂದ ಮೂವತ್ತು ವರ್ಷಗಳಷ್ಟು ಹಳೆಯ ಶಾಲೆಗಳಿವು. ಸಾಕಷ್ಟು ಹೆಸರು ಗಳಿಸಿವೆ. ಮೊದಲ ಶಾಲೆಯಂತೂ ಸುಮಾರು ಮೂರು ಸಾವಿರ ವಿದ್ಯಾರ್ಥಿಗಳನ್ನು ಹೊಂದಿದೆ. ಶಾಲೆಯ ಶುಲ್ಕ ಸುಮಾರು ಹತ್ತು ಸಾವಿರ ರೂಪಾಯಿ. ನರ್ಸರಿ ತರಗತಿಗಳಿಗೆ ಅವರು ತೆಗೆದುಕೊಳ್ಳುವ ಡೊನೇಶನ್ ಸುಮಾರು ಇಪ್ಪತ್ತೈದು ಸಾವಿರ ರೂಪಾಯಿಗಳು. ಶಾಲೆಯ ಒಟ್ಟು ವಾರ್ಷಿಕ ಆದಾಯ ನಾಲ್ಕು ಕೋಟಿಯನ್ನು ಮೀರುತ್ತದೆ. ಶಿಕ್ಷಕರ ಸಂಬಳ, ಸರ್ಕಾರಿ ಅಧಿಕಾರಿಗಳ ಗಿಂಬಳ, ಹಾಗೂ ಇತರೆ ಖರ್ಚುಗಳು ಒಂದೂವರೆ ಕೋಟಿಯನ್ನು ಮೀರುವುದಿಲ್ಲ. ಅಂದರೆ ವರ್ಷವೊಂದರಲ್ಲಿ ಸುಮಾರು ಎರಡುವರೆ ಕೋಟಿಯಷ್ಟು ನಿವ್ವಳ ಲಾಭ! ಇಂತಹ ಒಳ್ಳೇ ಲಾಭದಲ್ಲಿ ನಡೆಯುತ್ತಿರುವ ಶಾಲೆಗಳ ಶಿಕ್ಷಕರ ಪರಿಸ್ಥಿತಿ ಹೀಗಿದ್ದರೆ ಇದಕ್ಕಿಂತ ಕಡಿಮೆ ಲಾಭ ಮಾಡುವ ಇತರ ಶಾಲೆಗಳ ಶಿಕ್ಷಕರ ಪರಿಸ್ಥಿತಿ ಇನ್ನೂ ಹೇಗಿರಬಹುದೆಂದು ಊಹಿಸಿಕೊಳ್ಳಿ. ಲಕ್ಷಾಂತರ ಸಂಖ್ಯೆಯಲ್ಲಿ ದುಡಿಯುತ್ತಿರುವ ಖಾಸಗಿ ಶಾಲೆಯ ಶಿಕ್ಷಕರಿಗೆ ಈ ಶೋಷಣೆಯಿಂದ ಮುಕ್ತಿ ಪಡೆಯಬೇಕೆಂದರೆ ಇರುವ ಮಾರ್ಗವೊಂದೇ- ಪ್ರವೇಶ ಪರೀಕ್ಷೆ ಬರೆದು ಸರಕಾರಿ ಶಾಲೆಯನ್ನು ಸೇರಿಕೊಳ್ಳುವುದು. ಸರಕಾರವಾದರೂ ಎಷ್ಟು ಜನರಿಗೆ ಕೆಲಸ ಕೊಟ್ಟೀತು?
ಇನ್ನು ಸರಕಾರಿ ಶಾಲೆಯ ಶಿಕ್ಷಕರ ಪರಿಸ್ಥಿತಿ ಆದಾಯದ ದೃಷ್ಟಿಯಿಂದ ಖಾಸಗಿ ಶಿಕ್ಷಕರಿಗಿಂತ ತುಸು ಉತ್ತಮವಾದರೂ ಇತರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ವಿದ್ಯಾವಂತರಿಗೆ ಹೋಲಿಸಿದರೆ ತೀರಾ ಕಡಿಮೆಯೆಂದೇ ಹೇಳಬಹುದು. ಸರಕಾರ ಪ್ರತೀ ಬಾರಿ ವೇತನದ ಪುನರ್ ಪರೀಶೀಲನೆ ಸಂದರ್ಭದಲ್ಲೂ ಶಿಕ್ಷಕರು ಬೀದಿಗಿಳಿದು ಹೆಚ್ಚಿನ ವೇತನಕ್ಕಾಗಿ ಹೋರಾಟ ನಡೆಸಬೇಕಾದಂತಹ ಪರಿಸ್ಥಿತಿಯಿದೆ. ನನ್ನ ತಾಯಿ 33 ವರ್ಷ ಸತತವಾಗಿ ಸರಕಾರಿ ಶಾಲೆಯಲ್ಲಿ ದುಡಿದ ನಂತರ (ಇನ್ನೇನು ನಾಲ್ಕು ತಿಂಗಳಲ್ಲಿ ನಿವೃತ್ತಿ ಹೊಂದುತ್ತಾರೆ) ಬರುವ ವೇತನ ಇಪ್ಪತ್ತೈದು ಸಾವಿರವಷ್ಟೆ. ಆದರೆ ಈಗಷ್ಟೇ ಓದು ಮುಗಿಸಿ ಖಾಸಗಿ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುವವರ ಹುಡುಗ/ಹುಡುಗಿಯರ ವೇತನ 20 ರಿಂದ 60 ಸಾವಿರ ರೂಪಾಯಿಗಳು! ಶಿಕ್ಷಣ ವಲಯವು ಅನುತ್ಪಾದಕ ವಲಯವೆಂಬ ಧೋರಣೆಯೇ ಈ ಅಸಮಾನತೆಗೆ ಮೂಲ ಕಾರಣ. ನಮ್ಮ ಪ್ರಧಾನಮಂತ್ರಿಗಳು, ವಿತ್ತ ಮಂತ್ರಿಗಳು, ಮುಖ್ಯಮಂತ್ರಿಗಳು ನಮ್ಮ ದೇಶ ಹಾಗೂ ರಾಜ್ಯಗಳು ಸಾಧಿಸಿರುವ ಆರ್ಥಿಕ ಪ್ರಗತಿಯನ್ನು ಯಾವ ಶ್ರೀಸಾಮಾನ್ಯನಿಗೂ ಅರ್ಥವಾಗದ ಅಂಕಿ ಅಂಶಗಳ ಮೂಲಕ ಪ್ರಸ್ತುತ ಪಡಿಸುತ್ತಾರೆ. ದೇಶವು ಆರ್ಥಿಕವಾಗಿ ಇನ್ನೂ ಸಬಲವಾಗಬೇಕೆಂದರೆ ನಮ್ಮ ನಾಗರಿಕರು ಸುಶಿಕ್ಷಿತರಾಗುವುದು ಅನಿವಾರ್ಯ ಎಂದೆಲ್ಲಾ ಭಾಷಣ ಬಿಗಿಯುತ್ತಾರೆ. ಆದರೆ ಬಜೆಟ್ ಮಂಡಿಸುವಾಗ ಇಂತಹ ಸುಶಿಕ್ಷಿತ ವರ್ಗವನ್ನು ಸೃಷ್ಟಿಸುವ ಶಿಕ್ಷಕರನ್ನೇ ಮರೆತು ಬಿಡುತ್ತಾರೆ. ಒಬ್ಬ ಶಾಲಾ ಶಿಕ್ಷಕ ಇತರ ವೃತ್ತಿಪರರಂತೆ ಕಾರಿನಲ್ಲಿ ಕೆಲಸಕ್ಕೆ ಹೋಗುವುದನ್ನು ಊಹಿಸಿಕೊಳ್ಳುವುದು ಅಸಾಧ್ಯವಷ್ಟೇ ಅಲ್ಲ ಅಪರಾಧ ಕೂಡ. ಯಾಕೆಂದರೆ ದೇಶ ಸೇವೆ, ನಿಸ್ವಾರ್ಥ ಸೇವೆ ಎಂಬ ಮೌಲ್ಯಗಳೆಲ್ಲಾ ಶಿಕ್ಷಕರಿಗಷ್ಟೇ ಮೀಸಲಿಟ್ಟಿವೆಯಲ್ಲವೇ. ಆರ್ಥಿಕ ಶೋಷಣೆಯ ಜೊತೆಗೆ ಶಾಲಾ ಆಡಳಿತದವರಿಂದ ಮಾನಸಿಕ ಹಿಂಸೆ, ವಿದ್ಯಾರ್ಥಿಗಳ ಉದ್ಧಟತನ ಹಾಗೂ ಪೋಷಕರ ದರ್ಪವನ್ನು ಬೋನಸ್ಸೆಂಬಂತೆ ಪಡೆಯಬೇಕು.
ದಿನೇ ದಿನೇ ಶಿಕ್ಷಣದ ಗುಣ ಮಟ್ಟ ಕುಸಿಯುತ್ತಿದೆ ಎಂದು ಜನ ಆಡಿಕೊಳ್ಳುವುದುಂಟು. ಇದರಲ್ಲಿ ಸತ್ಯವಿಲ್ಲದಿಲ್ಲ. ಇದನ್ನು ನಿವಾರಿಸಲು ಶಿಕ್ಷಣ ತಜ್ಞರು ಶಿಶು-ಕೇಂದ್ರಿತ ಬೋಧನಾ ವಿಧಾನಗಳ ಬಗ್ಗೆ , ಶಿಕ್ಷಣದಲ್ಲಿ ಮನೋವಿಜ್ಞಾದ ಪಾತ್ರ ಎಂಬ ವಿಷಯಗಳ ಬಗ್ಗೆ ತಾಸುಗಟ್ಟಲೆ ಕೊರೆದು, ಪುಟಗಟ್ಟಲೆ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಗಿಟ್ಟಿಸಿ ಬೀಗುತ್ತಾರೆ. ಈ ವಿಚಾರಗಳೆಲ್ಲ ಒಳ್ಳೆಯದೇ ಪ್ರಭುಗಳೇ, ಇವನ್ನು ಖಂಡಿತವಾಗಿ ಅನುಸರಿಸೋಣ. ಆದರೆ ಇಂತಹ ಉದಾತ್ತ ಬೋಧನಾ ವಿಧಾನಗಳನ್ನು, ತಿಂಗಳ ಕೊನೆಯಲ್ಲಿ ದಿನಸಿಗೆ ಹಣ ಹೇಗೆ ಹೊಂದಿಸಬೇಕೆಂಬ ಎಂಬ ಚಿಂತೆಯಲ್ಲಿ ಮುಳುಗಿದ ಶಿಕ್ಷಕನು ಅನುಷ್ಠಾನಗೊಳಿಸಲು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಸಿದ್ಧನಾಗಿದ್ದಾನೆಯೆ ಎಂದು ನೀವ್ಯಾಕೆ ಯೋಚಿಸುವುದಿಲ್ಲ? ಶಿಕ್ಷಣದ ಗುಣಮಟ್ಟ ಕುಸಿಯಲು ಹಲವಾರು ಕಾರಣಗಳು ಒಂದಕ್ಕೊಂದು ಹೆಣೆದುಕೊಂಡಿವೆ. ಒಳ್ಳೆಯ ಶಿಕ್ಷಕರು ದೊರೆಯುತ್ತಿಲ್ಲವೆನ್ನುವುದು, ಯುವ ವರ್ಗಕ್ಕೆ ಶಿಕ್ಷಣ ವೃತ್ತಿಯು ಇಂದು ಆಕರ್ಷಕ ವೃತ್ತಿಯಾಗಿ ಉಳಿದಿಲ್ಲವೆನ್ನುವುದು, ಬಿ.ಎಡ್, ಟಿಸಿಎಚ್ ಕೋರ್ಸುಗಳ ಗುಣಮಟ್ಟ ಕುಸಿದಿರುವುದು. ಶಿಕ್ಷಣ ಇಲಾಖೆಯ ಬೇಜವಾಬ್ದಾರಿತನ, ಲಂಚಕೋರತನ ಇತ್ಯಾದಿ ಇದಕ್ಕೆ ಕಾರಣವೆನ್ನಬಹುದು. ಇಂದು ಬುಧ್ಧಿವಂತ ಯುವಕ/ಯುವತಿಯರಾರೂ ಶಿಕ್ಷಣ ಕ್ಷೇತ್ರಕ್ಕೆ ಬರಲು ಇಷ್ಟ ಪಡುವುದಿಲ್ಲ. ಶಿಕ್ಷಕರಾಗಲು ಯಾರು ಬಯಸುತ್ತೀರಿ ಎಂದು ನಾನು ತರಗತಿಯೊಂದರ ಮಕ್ಕಳಿಗೆ ಪ್ರಶ್ನೆ ಕೇಳಿದಾಗ ಅಲ್ಲಿ ಕುಳಿತಿದ್ದ ಅರವತ್ತು ಮಕ್ಕಳಲ್ಲಿ ಒಂದೋ ಎರಡೋ ಮಕ್ಕಳ ಕೈಗಳಷ್ಟೇ ಮೇಲೆದ್ದವು. ದಿನನಿತ್ಯ ಶಿಕ್ಷಕರ ಬವಣೆಯನ್ನು ಕಣ್ಣಾರೆ ನೋಡುವ ಅವರಿಗೆ ಶಿಕ್ಷಕರಾಗಲು ಪ್ರೇರಣೆಯಾದರೂ ಎಲ್ಲಿಂದ ಬರಬೇಕು ? ಉತ್ತಮ ವೇತನ ದೊರೆತಲ್ಲಿ, ಶಿಕ್ಷಕರಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ವೃತ್ತಿಪರತೆ ಹೆಚ್ಚಿದಲ್ಲಿ, ಒಳ್ಳೆಯ ಶಿಕ್ಷಕರು ದೊರೆಯುವರೆಂಬುದರಲ್ಲಿ ಅನುಮಾನವೇ ಇಲ್ಲ. ಈ ಬಗ್ಗೆ ಚಿಂತಿಸುವವರಾದರೂ ಯಾರು?
ಶಿಕ್ಷಕನೊಬ್ಬ ಮಕ್ಕಳಿಗೆ ದಂಡಿಸಿದಾಗ ಅಥವಾ ನಿಂದಿಸಿದಾಗ ಆ ಸುದ್ದಿಯು ದೊಡ್ಡಮಟ್ಟದಲ್ಲಿ ಮಾಧ್ಯಮಗಳಲ್ಲಿ ವಿಜೃಂಭಿಸುತ್ತದೆ. ಇಂತಹ ಕೃತ್ಯಗಳನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ಸ್ವಾತಂತ್ರ್ಯ ಬಂದು ಅರವತ್ನಾಲ್ಕು ವರ್ಷ ಕಳೆದರೂ ನಮ್ಮ ದೇಶದ ಮೂರನೇ ದರ್ಜೆಯ (ಅಥವಾ ಅದಕ್ಕಿಂತಲೂ ಹೀನ?!) ನೌಕರರಂತೆ ಜೀವಿಸುತ್ತಿರುವ ಖಾಸಗಿ ಶಾಲಾ ಶಿಕ್ಷಕರ ಬವಣೆಯ ಬಗ್ಗೆ ಯಾವ ಮಾಧ್ಯಮದವರಾದರೂ ಸೊಲ್ಲೆತ್ತಿದ್ದಾರೆಯೇ ? ತಮ್ಮ ಮಕ್ಕಳಿಗೆ ಒಂದು ಮಾರ್ಕು ಕಡಿಮೆ ಬಂದರೂ ಶಿಕಕ್ಷರನ್ನು ದೂಷಿಸುವ ಪೋಷಕರು ಅವರ ಮಕ್ಕಳ ಭವಿಷ್ಯದ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಶಿಕ್ಷಕರ ಸಂಕಷ್ಟಗಳ ಬಗ್ಗೆ ಒಂದು ಕ್ಷಣವಾದರೂ ಯೋಚಿಸುತ್ತಾರೆಯೇ? ವರುಷಕ್ಕೆ ಕೋಟಿಗಟ್ಟಲೆ ಎಣಿಸುವ ಶಾಲಾ ಆಡಳಿತದವರು ತಮಗೆ ಇಷ್ಟು ಲಾಭ ತಂದು ಕೊಟ್ಟ ಶಿಕ್ಷಕರು ಮೂರ್ನಾಲ್ಕು ಸಾವಿರಗಳಲ್ಲಿ ಹೇಗಾದರೂ ಜೀವನ ನಡೆಸುತ್ತಿರಬಹುದೆಂದು ಯೋಚಿಸುತ್ತಾರೆಯೆ ? ದಾರಿಯಲ್ಲಿ ತನ್ನ ಹಳೆಯ ಗುರುವು ಕಂಡಾಗ ಹೇಗಿದ್ದೀರ ಎಂದು ಸಹ ಮಾತನಾಡಿಸದೆ ಮುಖ ತಿರುಗಿಸಿಕೊಂಡು ಹೋಗುವ ಯುವಕರು ತನಗೆ ತನ್ನ ಸಂಬಳ ಎಣಿಸಲು ಸಾಧ್ಯವಾಗಿರುವುದು ಇವರು ನನಗೆ ಲೆಖ್ಖ ಹೇಳಿಕೊಟ್ಟಿದ್ದರಿಂದಲೇ ಅಲ್ಲವೆ ಎಂದು ಯೋಚಿಸುತ್ತಾರೆಯೇ?
ಓ ಕೃತಘ್ನ ಸಮಾಜವೇ… ಶಿಕ್ಷಕರ ದಿನಾಚರಣೆಯಂದು “ಶಿಕ್ಷಕ ವೃತ್ತಿ ಮಹಾನ್ ವೃತ್ತಿ…” ಅಂತೆಲ್ಲಾ ತೌಡು ಕುಟ್ಟಿದ್ದು ಸಾಕು, ಇಂದು ನಿಮ್ಮ “ಹ್ಯಾಪೀ ಟೀಚರ್ಸ್ ಡೇ” ಎಂಬ ಅರ್ಥ ಕಳೆದುಕೊಂಡ ಶುಭಾಶಯ ನಮ್ಮಲ್ಲಿ ಯಾವುದೇ ಭಾವನೆಗಳನ್ನು ಸ್ಫುರಿಸುವುದಿಲ್ಲ, “..ಗುರುಬ್ರಹ್ಮ, ಗುರು ವಿಷ್ಣು, ಗುರು ದೇವೋ… ಮಹೇಶ್ವರಃ…” ಅಂತೆಲ್ಲಾ ಹೇಳಿ ನಮ್ಮ ಕಿವಿಯ ಮೇಲೆ ಹೂ ಇಡುವುದನ್ನು ಈಗಲಾದರೂ ನಿಲ್ಲಿಸಿ. ನೀವು ಇವೇನನ್ನು ಮಾಡದಿದ್ದರೂ ನಮ್ಮ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವಷ್ಟು ‘ವೃತ್ತಿ-ಅಭಿಮಾನ’ ನಮ್ಮಲ್ಲಿ ಇನ್ನೂ ಉಳಿಸಿಕೊಂಡಿದ್ದೇವೆ ಹಾಗೂ ಉಳಿಸಿಕೊಂಡಿರುತ್ತೇವೆ. ನಾವೇನೂ ಮಹಾನ್ ವ್ಯಕ್ತಿಗಳಲ್ಲ, ನಮಗೂ ಇತರರಂತೆ ಭೌತಿಕ ಅವಶ್ಯಕತೆಗಳಿರುತ್ತವೆ, ಆಸೆ-ಆಕಾಂಕ್ಷೆಗಳಿರುತ್ತವೆ. ಇವೆಲ್ಲಾ ನಿಮ್ಮ ಬಣ್ಣ-ಬಣ್ಣದ ಮಾತುಗಳಿಂದ ದೊರೆಯುವುದಿಲ್ಲ. ಇದಕ್ಕೆ ಒಳ್ಳೆಯ ಸಂಬಳ ಬೇಕು…. ಹಲೋ… ಕೇಳುತ್ತಿದೆಯಾ????